ಉಡುಪಿ, ಫೆ.28 (DaijiworldNews/AK): ಸಣ್ಣಪುಟ್ಟ ವಿಚಾರಕ್ಕೆ ಉಡುಪಿಯ ಸಿಟಿ ಸೆಂಟರ್ ಮಾಲ್ನ ಸಿಬ್ಬಂದಿ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ. ಗಾಯಾಳುಗಳನ್ನು ನಿಹಾಲ್ (17) ಮತ್ತು ಫೈಝಲ್ (18) ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ, ವಿದ್ಯಾರ್ಥಿಗಳು ತಮ್ಮ ತರಗತಿಗಳನ್ನು ಮುಗಿಸಿದ ನಂತರ ಸಿಟಿ ಸೆಂಟರ್ಗೆ ಭೇಟಿ ನೀಡಿದ್ದರು. ಮೂರನೇ ಮಹಡಿಯಿಂದ ಕೆಳಗಿಳಿಯುವಾಗ, ಲಿಫ್ಟ್ ಕೆಟ್ಟದ್ದನ್ನು ಕಂಡು ಸ್ವಯಂಚಾಲಿತ ಎಸ್ಕಲೇಟರ್ ಅನ್ನು ಬಳಸಲು ನಿರ್ಧರಿಸಿದರು. ಆದರೆ, ಇಬ್ಬರು ಸಿಬ್ಬಂದಿಗಳು ಅವರನ್ನು ತಡೆದು ಎಸ್ಕಲೇಟರ್ ಬಳಸುವುದನ್ನು ಪ್ರಶ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಸಿಬ್ಬಂದಿ ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಪರಿಣಾಮವಾಗಿ, ನಿಹಾಲ್ ಅವರ ತುಟಿಗೆ ಗಾಯವಾಗಿದ್ದು, ಫೈಝಲ್ ಅವರ ಹೊಟ್ಟೆ ಮತ್ತು ಬೆನ್ನಿಗೆ ಪೆಟ್ಟು ಬಿದ್ದಿದೆ. ವೀಕ್ಷಕರು ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳನ್ನು ದಾಳಿಯಿಂದ ರಕ್ಷಿಸಿದ್ದಾರೆ. ತಕ್ಷಣ ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.