ಬಂಟ್ವಾಳ, ಫೆ.28 (DaijiworldNews/AK): ಸಂಶಯಾಸ್ಪದ ರೀತಿಯಲ್ಲಿ ನಾಪತ್ತೆಯಾಗಿರುವ ದಿಗಂತ್ ನ ಮನೆಗೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿದ್ದಾರೆ.

ಮನೆಯಲ್ಲಿ ದಿಗಂತ್ ಪೋಷಕರ ಜೊತೆ ಐಜಿಪಿ.ಅಮಿತ್ ಸಿಂಗ್ ಹಾಗೂ ಎಸ್.ಪಿ.ಯತೀಶ್ ಎನ್.ಅವರು ಕೆಲವು ಹೊತ್ತು ಈ ಪ್ರಕರಣದ ಮಾಹಿತಿ ಪಡೆದುಕೊಂಡಿದ್ದಾರೆ.ಬಳಿಕ ಅವರು ರಕ್ತದ ಕಲೆಯಿರುವ ಚಪ್ಪಲಿ ಹಾಗೂ ಮೊಬೈಲ್ ಪತ್ತೆಯಾದ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಸ್ವಯಂಪ್ರೇರಿತ ಬಂದ್:
ದಿಗಂತ್ ನಾಪತ್ತೆಯಾಗಿ ಮೂರು ದಿನ ಕಳೆದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪರಂಗಿಪೇಟೆಯ ಸಾರ್ವಜನಿಕರು ಹಾಗೂ ವಿಶ್ವಹಿಂದೂಪರಿಷತ್ ಫರಂಗಿಪೇಟೆ ಪ್ರಖಂಡ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪರಂಗಿಪೇಟೆ ಬಂದ್ ಗೆ ಕರೆ ನೀಡಿದೆ.
ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಸಂಜೆ ಸಭೆ ನಡೆದು ಪ್ರತಿಭಟನೆಯ ರೂಪುರೇಷೆಗಳ ಬಗ್ಗೆ ತಯಾರಿ ಮಾಡಲಾಗಿದೆ.
ಬೆಳಿಗ್ಗೆ 9 ಗಂಟೆಗೆ ಪರಂಗಿಪೇಟೆ ಜಂಕ್ಷನ್ ನಿಂದ ಪೋಲಿಸ್ ಹೊರಠಾಣೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ಪ್ರತಿಭಟನಾ ಸಭೆ ನಡೆಸಿ, ಪೋಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ನೀಡಲು ಯೋಜಿಸಲಾಗಿದೆ.
ಬೆಳಿಗ್ಗೆ 9 ಗಂಟೆಯಿಂದ ಸುಮಾರು 11 ಗಂಟೆ ವರೆಗೆ ಪರಂಗಿಪೇಟೆಯನ್ನು ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ ಎಂಬ ವಿಚಾರವನ್ನು ಸಾಮಾಜಿಕ ಕಾರ್ಯಕರ್ತ ಉದ್ಯಮಿ ಉಮೇಶ್ ಶೆಟ್ಟಿ ಬರ್ಕೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.