ಉಡುಪಿ, ಮಾ.02 (DaijiworldNews/AA): ಬಿಜೆಪಿ ನಾಯಕರು ಇತರರ ಬಗ್ಗೆ ಟೀಕೆ ಮಾಡುವ ಮೊದಲು ಸ್ವಂತ ಮನೆಯನ್ನು ಸರಿ ಮಾಡಿಕೊಳ್ಳಲಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್, ಹಿಂದುತ್ವದ ಬಗ್ಗೆ ತಮ್ಮ ನಿಲುವನ್ನು ಶ್ಲಾಘಿಸಿ ಸ್ವಾಗತಿಸಿದ ಬಿಜೆಪಿ ಮುಖಂಡರಾದ ಯಶಪಾಲ್ ಸುವರ್ಣ ಮತ್ತು ಸುನೀಲ್ ಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಬಿಜೆಪಿ ನಾಯಕರು ಬೇರೆಯವರ ಬಗ್ಗೆ ಮಾತನಾಡುವ ಮೊದಲು ತಮ್ಮ ಸ್ವಂತ ಮನೆಯನ್ನು ಸರಿಪಡಿಸಿಕೊಳ್ಳಲಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ನಾನು ಯಾವ ದೇವಸ್ಥಾನಕ್ಕೆ ಭೇಟಿ ನೀಡಿದರೂ ಅಥವಾ ಯಾವ ಧಾರ್ಮಿಕ ವಿಚಾರ ಮಾತನಾಡಿದರೂ ಸಂಚಲನವಾಗುತ್ತದೆ. ನಿಮ್ಮ ಜಿಲ್ಲೆಯವರೇ ನನ್ನನ್ನು ಏಸು ಕುಮಾರ ಎಂದು ಕರೆದಿದ್ದರು. ಏಕೆಂದರೆ ಯೇಸುವಿನ ಶಿಲಾಮೂರ್ತಿಗೆ ನಾನು ಪ್ರೋತ್ಸಾಹ ಕೊಟ್ಟೆ ಎಂಬ ಕಾರಣಕ್ಕೆ ಹೀಗೆ ಹೇಳಿದ್ದರು. ಯಾರೋ ಒಬ್ಬ ಎಂಪಿ ಮುಸ್ಲಿಮರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ. ಆದರೆ ನಾನು ಅವರೆಲ್ಲ ನಮ್ಮ ಬ್ರದರ್ಸ್, ಅವರಿಲ್ಲದೆ ಬದುಕೋಕೆ ಆಗಲ್ಲ ಎಂದಿದ್ದೆ. ಚಿಕನ್ನು ಮಟನ್ನು ನಾವು ಕಡಿಯೋಕೆ ಆಗುತ್ತಾ? ಅವರೇ ಕಡಿಯುವವರು. ಯಾವ ಕೆಲಸ ಯಾರು ಮಾಡಬೇಕು ಅವರೇ ಮಾಡುತ್ತಾರೆ. ಅವರನ್ನು ಬ್ರದರ್ಸ್ ಅಂದಿದ್ದಕ್ಕೆ ನನ್ನನ್ನು ಇನ್ನೊಂದು ಹೆಸರಲ್ಲಿ ಕರೆದರು ಎಂದು ಕಿಡಿಕಾರಿದರು.
ನಾನು ಶಿವನ ಮಗ ಶಿವಕುಮಾರ್ ಎಂದು ತಂದೆ ಹೆಸರಿಟ್ಟರು. ದೊಡ್ಡ ಆಲದ ಕೆಂಪೇಗೌಡನ ಮಗ ನಾನು. ಶಿವನ ದೇವಸ್ಥಾನಕ್ಕೆ ಹೋದರೆ ಅಲ್ಲೂ ಏನೋ ಒಂದು ಕರೀತಾರೆ. ನಾನು ಕುಂಭಮೇಳಕ್ಕೆ ಹೋಗಿದ್ದೆ. ಅಲ್ಲಿ ನೀರಿಗೆ ಏನಾದರೂ ಜಾತಿ, ಧರ್ಮ ಇದೆಯಾ? ನೀರಿಗೆ ಏನಾದರೂ ಪಾರ್ಟಿ ಇದೆಯಾ? ತಿ.ನರಸೀಪುರದ ಕುಂಭಮೇಳದಲ್ಲೂ ನಾನು ಭಾಗಿಯಾಗಿದ್ದೇನೆ. ಕುಂಭಮೇಳದಲ್ಲಿ ಭಾಗಿ ಆದರೆ ತಪ್ಪೇನಿದೆ? ಯಾರು ಯಾವ ಲೆಕ್ಕಚಾರ ಬೇಕಾದರೂ ಹಾಕಿಕೊಳ್ಳಲಿ, ಅವಶ್ಯಕತೆ ಇಲ್ಲ. ಯಾವ ಲೆಕ್ಕಾಚಾರನೂ ಅವಶ್ಯಕತೆ ಇಲ್ಲ ಎಂದು ಹರಿಹಾಯ್ದರು.
ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದಿಂದ ಪ್ರತ್ಯೇಕ ಇಬ್ಬರು ಗಡಿ ಉಸ್ತುವಾರಿ ಸಚಿವರ ನೇಮಕ ವಿಚಾರವಾಗಿ ಮಾತನಾಡಿದ ಅವರು, ನಮ್ಮಲ್ಲೂ ಗಡಿಯಲ್ಲಿ ಉಸ್ತುವಾರಿ ಸಚಿವರಿದ್ದಾರೆ. ಗಡಿಯಲ್ಲಿರುವ ಮಂತ್ರಿಗಳೇ ಎಲ್ಲಾ ಕೆಲಸ ನಿಭಾಯಿಸುತ್ತಾರೆ ಎಂದು ತಿಳಿಸಿದರು.