ಮಂಗಳೂರು, ಮಾ.02(DaijiworldNews/TA) : ಎಂಸಿಸಿ ಬ್ಯಾಂಕ್ ನ 19ನೇ ಶಾಖೆ ಬೆಳ್ಮಣ್ ನಲ್ಲಿ ಆದಿತ್ಯವಾರ ಲೋಕಾರ್ಪಣೆಗೊಂಡಿತು. ಬೆಳ್ಮಣ್ ಚರ್ಚ್ ಧರ್ಮಗುರು ಫೆಡ್ರಿಕ್ ಮಸ್ಕರೇನಸ್ ಅವರು ದೀಪ ಬೆಳಗಿಸುವ ಮೂಲಕ ನೂತನ ಬ್ಯಾಂಕ್ ಉದ್ಘಾಟಿಸಿ ಶುಭ ಹಾರೈಸಿದರು.





ಬಳಿಕ ಆಶೀರ್ವಚನದ ನುಡಿಗಳನ್ನಾಡಿದ ಅವರು, “ಎಂಸಿಸಿ ಬ್ಯಾಂಕ್ ನ 19ನೇ ಶಾಖೆ ಇಂದು ಉದ್ಘಾಟನೆಗೊಂಡಿದೆ. ಗ್ರಾಹಕರ ಸಹಕಾರದಿಂದ ಬ್ಯಾಂಕ್ ಈ ಮಟ್ಟಕ್ಕೆ ತಲುಪಿದೆ. ಅನಿಲ್ ಲೋಬೋ ಮುಂದಾಳತ್ವದಲ್ಲಿ ಹಾಗೂ ನಿರ್ದೇಶಕರ ಅಹರ್ನಿಶಿ ದುಡಿಮೆ ಮತ್ತು ಸಿಬ್ಬಂದಿಯ ಕಾರ್ಯ ದಕ್ಷತೆಯಿಂದ ಎಂಸಿಸಿ ಬ್ಯಾಂಕ್ ಮನೆಮಾತಾಗಿದೆ. ಬೆಳ್ಮಣ್ ಶಾಖೆಯು ಅದೇ ರೀತಿ ಗ್ರಾಹಕ ಸ್ನೇಹಿಯಾಗಿ ಬೆಳೆದು ಜನರಿಗೆ ವರದಾನವಾಗಲಿ“ ಎಂದರು.
ಬಳಿಕ ಮಾತಾಡಿದ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಅವರು, ”ವಿಶ್ವಾಸಾರ್ಹತೆಗೆ ಇನ್ನೊಂದು ಹೆಸರೇ ಎಂಸಿಸಿ ಬ್ಯಾಂಕ್. ಈ ಕಾರಣದಿಂದ 113 ವರ್ಷಗಳಿಂದ ಬ್ಯಾಂಕ್ ಗ್ರಾಹಕ ಸೇವೆಯಲ್ಲಿ ಹೆಸರು ಪಡೆದಿದೆ. ಕಳೆದ 10 ವರ್ಷಗಳಲ್ಲಿ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್ ಗೆ ಸರಿಸಮಾನವಾಗಿ ಬೆಳೆದಿದೆ. ಒಂದು ಊರಿಗೆ ಬ್ಯಾಂಕ್ ಬಂತು ಎಂದರೆ ಅದು ಪ್ರಗತಿಗೆ ದಾರಿಯಾಗಿದೆ. ಜನರ ವ್ಯವಹಾರಕ್ಕೆ ಪೂರಕವಾಗಿ ಬ್ಯಾಂಕ್ ಸೇವೆ ಮಾಡಿದಲ್ಲಿ ಜನರು ಬ್ಯಾಂಕ್ ಗೆ ಮತ್ತಷ್ಟು ಹತ್ತಿರವಾಗುತ್ತಾರೆ. ಜನರ ವಿಶ್ವಾಸವನ್ನು ಇದೇ ರೀತಿ ಮುಂದುವರಿಸಿ“ ಎಂದರು.
ಬಳಿಕ ಮಾತಾಡಿದ ದೈಜಿ ವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮಾತಾಡಿ, “ಎಂಸಿಸಿ ಬ್ಯಾಂಕ್ ಅನ್ನು ಹಿಂದೆ ಕ್ಯಾಥೋಲಿಕ್ ಸಮುದಾಯದವರು ಅಮ್ಚೆ ಬ್ಯಾಂಕ್ ಎಂದು ಕರೆಯುತ್ತಿದ್ದರು. ಆದರೆ ಇಂದು ಇದು ನಮ್ಮೆಲ್ಲರ ಬ್ಯಾಂಕ್ ಆಗಿದೆ. ಇದಕ್ಕೆ ಕಾರಣ ಬ್ಯಾಂಕ್ ನ ಗ್ರಾಹಕ ಸ್ನೇಹಿ ನಿರ್ದೇಶಕರು ಮತ್ತು ಸಿಬ್ಬಂದಿಯ ತಂಡ. ಅನಿಲ್ ಲೋಬೋ ಅವರ ನೇತೃತ್ವದಲ್ಲಿ ಬ್ಯಾಂಕ್ ಯಶಸ್ಸಿನ ದಾರಿಯಲ್ಲಿ ಮುನ್ನಡೆಯುತ್ತಿದೆ. ಅವರಲ್ಲಿನ ನಾಯಕತ್ವ ಗುಣದಿಂದಲೇ ಬ್ಯಾಂಕ್ ಹೊಸ ಹೊಸ ಶಾಖೆಯನ್ನು ಗ್ರಾಮೀಣ ಭಾಗಗಳಲ್ಲಿ ತೆರೆಯುತ್ತಿದೆ. ಈ ಮೂಲಕ ಜನರಿಗೆ ಆರ್ಥಿಕ ವಹಿವಾಟು ನಡೆಸಲು ನೆರವಾಗುತ್ತಿದೆ. ನಗುಮೊಗದ ಸಿಬ್ಬಂದಿಯ ಸೇವೆಯಿಂದ ಜನರಿಗೆ ಆಪ್ತವಾಗಿರುವ ಬ್ಯಾಂಕ್ ಮುಂದೆ ಇನ್ನಷ್ಟು ಶಾಖೆಗಳನ್ನು ವಿಸ್ತರಿಸಿ ಬೆಳೆಯಲಿ“ ಎಂದರು.
ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಮಾತಾಡಿ, ”ಬ್ಯಾಂಕ್ ಆಗಮನಕ್ಕೆ ಬೆಳ್ಮಣ್ ನಾಗರಿಕರು ತುಂಬು ಹೃದಯದ ಸ್ವಾಗತ ಕೋರಿದ್ದಾರೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬ್ಯಾಂಕ್ ನಲ್ಲಿ ಖಾತೆ ತೆರೆಯುತ್ತಿದ್ದಾರೆ. ನಮ್ಮ ಧ್ಯೇಯ ಬ್ಯಾಂಕ್ ಶಾಖೆಗಳನ್ನು ಹೆಚ್ಚಿಸಿ ಗ್ರಾಹಕರಿಗೆ ನೆರವಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಹಕಸ್ನೇಹಿಯಾಗಿ ಬ್ಯಾಂಕ್ ಕೆಲಸ ಮಾಡಲಿದೆ“ ಎಂದರು.
ವೇದಿಕೆಯಲ್ಲಿ ಬೆಳ್ಮಣ್ ಗ್ರಾಮ ಪಂಚಾಯತ್ ರಾಮೇಶ್ವರಿ ಎಂ. ಶೆಟ್ಟಿ, ಜನರಲ್ ಮೆನೇಜರ್ ಸುನಿಲ್, ಅನಿವಾಸಿ ಉದ್ಯಮಿ ರೊನ್ ರಾಡ್ರಿಗಸ್, ಲಂಡನ್, ಬ್ರಾಂಚ್ ಮೆನೇಜರ್ ಶೈನಿ ಲಸ್ರಾದೋ ಮತ್ತಿತರರು ಉಪಸ್ಥಿತರಿದ್ದರು. ಎಲ್ಸನ್ ಕಾರ್ಯಕ್ರಮ ನಿರೂಪಿಸಿದರು.