ಉಡುಪಿ, ಮಾ.02(DaijiworldNews/TA) : ಚುನಾವಣೆ ಸಮಯದಲ್ಲಿ ಕೊಟ್ಟ ಭರವಸೆಯ ಮಾತಿನಂತೆ ನಮ್ಮ ಸರಕಾರವು ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರದ ಮೊದಲ ಸಂಪುಟ ಸಭೆನಲ್ಲಿಯೆ ಆ ಎಲ್ಲ ಐದು ಭರವಸೆಗಳನ್ನು ಜಾರಿ ಮಾಡಿದೆವು. ಕೊಟ್ಟ ಮಾತನ್ನು ಉಳಿಸಿಕೊಂಡೆವು, ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕಾರ್ಕಳ ಗಾಂಧಿಮೈದಾನದಲ್ಲಿ ಮಾಜಿ ಶಾಸಕ ಹೆಚ್. ಗೋಪಾಲ ಭಂಡಾರಿ ವೇದಿಕೆಯಲ್ಲಿ ಕಾರ್ಕಳ ಬ್ಲಾಕ್ ಹಾಗೂ ಹೆಬ್ರಿ ಬ್ಲಾಕ್ ಆಯೋಜಿಸಿದ ಕುಟುಂಬೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದರು.
ಕಮಲ ಕೆಸರಿನಲ್ಲಿದ್ದರೇನೆ ಚೆಂದ, ತೆನೆ ಹೊತ್ತ ಮಹಿಳೆ ಹೊಲದಲ್ಲಿದ್ದರೇನೆ ಚೆಂದ, ದಾನ ಧರ್ಮ ಮಾಡುವ ಕೈ ಆಡಳಿತ ಮಾಡಬೇಕು ಎಂದು ನಾನು ಹೇಳುತ್ತಲೇ ಬಂದವನು ,ಅದೇ ಪ್ರಕಾರ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ತಿಂಗಳಿಗೆ ಎರಡು ಸಾವಿರ ಪಿಂಚಣಿ ಮತ್ತು ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಿದ್ದೇವೆ. ನಮ್ಮ ಮಾತಿಗೆ ನಾವು ಬದ್ಧರಾಗಿದ್ದೇವೆ .
ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದವರ ಪರಿಸ್ಥಿತಿ ಏನಾಯಿತೆನ್ನುವುದನ್ನು ಸ್ವತಃ ಸುಧಾಕರ್ ಹೇಳಿದ್ದಾರೆ. ಆ ರೀತಿ ಸಮಾಧಿಯಾಗುತ್ತಿರುವವರ ಹೆಸರಿನ ಪಟ್ಟಿಯೊ ನನ್ನಲ್ಲಿ ಇದೆ, ಅದನ್ನು ಅಧಿವೇಶನದ ವೇಳೆ ಹೇಳಲಿಕ್ಕಿದ್ದೇನೆ. ಜನರು ಹೇಳಿಕೊಂಡು ಕೊಂಡಾಡುವಂತಹ ಕೆಲಸವನ್ನು ಬಿಜೆಪಿಯವರು ಮಾಡಿಲ್ಲ. ನಾವು ಮಾಡಿರುವ ಜನಪರ ಕೆಲಸ ನಿಮಗೆ ಹಿಡಿಸಲಿಲ್ಲವೆಂದಾದರೆ ಕಾಂಗ್ರೆಸ್ಸಿನವರು ಮಾಡಿದ ಕಾರ್ಯಕ್ರಮ ನಮಗೆ ಬೇಡ ಎಂದು ಬಸ್ಸಲ್ಲಿ ಟಿಕೆಟ್ ಖರೀದಿಸಿ,ತಿಂಗಳ ಪಿಂಚಣಿ ತಗೊಂಡಿದ್ದೆಲ್ಲವನ್ನೂ ಮರಳಿಸಿ,ಮನೆಯ ವಿದ್ಯುತ್ ಬಿಲ್ ಬಾಕಿ ಸಮೇತ ಪಾವತಿಸಿ ನಿಮ್ಮ ನೈಜ ವಿರೊಧವನ್ನು ತೋರಿಸಿಕೊಟ್ಟು ಬದ್ಧತೆಯನ್ನು ಸಾಬೀತುಪಡಿಸಿ ಎಂದು ಬಿಜೆಪಿಯವರ ಬದ್ಧತೆಗೆ ಸವಾಲೆಸೆದರು.
ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಏರ್ಪಡಿಸಿ ಬೈಲೂರಿನ ಪರಶುರಾಮ ಥೀಮ್ ಪಾರ್ಕಿನ ಅವಸ್ಥೆಯನ್ನು ಕೂಡಾ ತೋರಿಸುವ ವ್ಯವಸ್ಥೆ ಮಾಡಿ. ಮುಂದಿನ ವಿಧಾನಸಭಾ ಚುನಾವಣೆ ವೇಳೆ ಅದೇ ಅರೆಬರೆ ಥೀಮ್ ಪಾರ್ಕನ್ನು ತೋರಿಸುತ್ತಲೇ ಮತ ಪಡೆಯಿರಿ. ಈ ಭೂಮಿಲ್ಲಿ ಜನ್ಮಕ್ಕೆ ಬರುವಾಗ ಯಾರೂ ಜಾತಿ ಕೇಳಲಿಲ್ಲ. ಈ ಜಾತಿಯನ್ನು ಎತ್ತಿಕಟ್ಟಿರುವುದೇ ಬಿಜೆಪಿಯವರು ಎಂದರು.
ಕಳೆದ ವಿಧಾನಸಭಾ ಚುನಾವಣೆನಲ್ಲಿ ಸೋತವರೆಲ್ಲರನ್ನೂ ಕರೆಸಿ ಸಭೆ ನಡೆಸಿದ್ದೇನೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸೋತವರು,ಜಿಲ್ಲಾ ಹಾಗೂ ತಾಲೂಕು ಮತ್ತು ಬ್ಲಾಕ್ ಮಟ್ಟದ ಮತ್ತು ಎಲ್ಲ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಎಲ್ಲರೂ ಸಭೆ ಸೇರಿ ಯಾರೆಲ್ಲ ಕಾರ್ಯಕರ್ತರಿಗೆ ಸರಕಾರದ ಸಮಿತಿಗಳಲ್ಲಿ ನೇಮಕಾತಿ ಮಾಡಿದೆ ಅವರನ್ನೆಲ್ಲರನ್ನೂ ಸಭೆ ಸೇರಿಸಿ ಸನ್ಮಾನ ಮಾಡಬೇಕು. ಬಾಕಿ ಸಮಿತಿಗಳಿಗೆ ನೇಮಕವನ್ನೂ ಪೂರ್ತಿ ಮಾಡುತ್ತೇವೆ. ಯಾರನ್ನೆಲ್ಲ ಗುರುತಿಸುವಲ್ಲಿ ಲೋಪವಾಗಿದೆ ಎಂದು ಎಲ್ಲವನ್ನೂ ಗುರುತಿಸಬೇಕು. ಮುಂದಿನ ಮಾರ್ಚ್ ತಿಂಗಳಲ್ಲಿ ರಾಜ್ಯದಲ್ಲಿ ಅದೇ ಕಾರ್ಯಕ್ರಮದ ಆಚರಣೆಯ ವಾರವನ್ನಾಗಿ ಮಾಡಲಿಕ್ಕಿದೆ. ಇದು ನನ್ನ ಆದೇಶವಲ್ಲ ಹೈಕಮಾಂಡ್ ಸೂಚನೆ. ಕರಾವಳಿಯ ಭಾಗವನ್ನು ಒಂದು ಹೊಸತಾದ ಪ್ರವಾಸೋದ್ಯಮಕ್ಕೆ ಪರಿವರ್ತನೆಗೊಳಿಸುವುದಕ್ಕಿದೆ. ಉದ್ಯೋಗ ಸೃಷ್ಠಿಯಾಗುವಂತಹ ಹೊಸ ನಿರ್ಮಾಣಗಳ ಬಗ್ಯೆ ಈಗಾಗಲೇ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಡಿ .ಕೆ.ಶಿವಕುಮಾರ್ ಹೇಳಿದರು.
ತಾನು ಮೊಯ್ಲಿಯವರ ಶಿಷ್ಯನಾಗಿ ಅವರನ್ನು ಸನ್ಮಾನಿಸುವ ಘನಕಾರ್ಯವನ್ನು ಮಾಡಲು ಒಪ್ಪಿಕೊಳ್ಳುತ್ತಿರಲಿಲ್ಲ ಬದಲಾಗಿ, ಕೆ ಪಿ ಸಿ ಸಿ ಅಧ್ಯಕ್ಷನ ನೆಲೆಯಲ್ಲಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸುವ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನನ್ನ ರಾಜಕೀಯ ಏಳಿಗೆಯಲ್ಲಿ ಅವರ ಆಶೀರ್ವಾದ ಅಪಾರವೂ, ಪ್ರಮುಖವೂ ಆಗಿದೆ ಎಂದು ಮೊಯ್ಲಿಯವರನ್ನು ಕೊಂಡಾಡಿದರು.
ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ: ಕಾರ್ಕಳಕ್ಕೆ ಆಗಮಿಸುತ್ತಿರುವ ಡಿಕೆಶಿವಕುಮಾರ್ ಅವರಿಗೆ ಸ್ವಾಗತ ಹೇಳಿ ಕೆಲವೊಂದು ಪದಗಳಲ್ಲಿ ಅಭಿನಂದಿಸಿ ಜಾಲತಾಣದಲ್ಲಿ ಬರೆದಿದ್ದ ಕಾರ್ಕಳದ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಅವರನ್ನು ಮೊಯ್ಲಿ ಮತ್ತು ಡಿಕೆಶಿವಕುಮಾರ್ ಬಹಳಷ್ಟು ಮಾತುಗಳಿಂದ ತರಾಟೆಗೆ ತೆಗೆದುಕೊಂಡರು. ಮೊದಲು ಬಿಜೆಪಿಯವರು ತಮ್ಮ ಮನೆಯನ್ನು ಸರಿಪಡಿಸಲಿ. ಸುನಿಲ್ ಕುಮಾರ್ ಅವರು ರಾಜ್ಯ ಪ್ರಧಾನಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಯಾಕೆ ಕೊಟ್ಟಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಬೇಕು. ಸುನಿಲ್ ಕುಮಾರ್ ಏನು ಮಾಡಿದ್ದಾರೆ ಎಂದು ಕೇಳುವುದಕ್ಕೆ ಕಾರ್ಕಳದಲ್ಲಿ ವೇದಿಕೆಯೊಂದನ್ನು ಮಾಡಬೇಕು , ಪ್ರಶ್ನೆ ಕೇಳುವುದಕ್ಕೆ ಕಾಂಗ್ರೆಸ್ಸಿನ ಕಾರ್ಯಕರ್ತ ಸುಧೀರ್ ಮರೋಳಿಯೇ ಸಾಕು ಎಂದರು.
ಮಾಜಿಸಚಿವರಾದ ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ರಮಾನಾಥ ರೈ,ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ತ್ ಸದಸ್ಯರಾದ ಐವನ್ ಡಿ ಸೋಜಾ, ಮಂಜುನಾಥ ಭಂಡಾರಿ, ಮುಖಂಡರಾದ ಎಂ.ಎ .ಗಫೂರ್, ಮಿಥುನ್ ರೈ, ರಕ್ಷಿತ್ ಶಿವರಾಮ, ರಮೇಶ್ ಕಾಂಚನ್, ಕಿರಣ್ ಹೆಗ್ಡೆ, ಬಿಪಿನ್ ಚಂದ್ರ ಪಾಲ್ ನಕ್ರೆ, ಮುದ್ರಾಡಿ ಮಂಜುನಾಥ ಪೂಜಾರಿ, ಪದ್ಮರಾಜ್, ಸುರೇಂದ್ರ ಶೆಟ್ಟಿ, ಕಾರ್ಕಳ ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಅಜಿತ್ ಹೆಗ್ಡೆ, ಹೆಬ್ರಿ ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಶಂಕರ್ ಸೇರಿಗಾರ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ ಭಟ್ ಮೊದಲಾದವರು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರೆ , ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು.