ಉಳ್ಳಾಲ, ಜೂ 14 (Daijiworld News/MSP): ಉಳ್ಳಾಲ ಮತ್ತು ಸೋಮೇಶ್ವರದಲ್ಲಿ ಉಚ್ಚಿಲದಲ್ಲಿ ಸಮುದ್ರ ಕೊರೆತ ಯಥಾಸ್ಥಿತಿ ಮುಂದುವರಿದಿದ್ದು, ಕಿಲೇರಿಯಾ ನಗರದಲ್ಲಿ ಐದು ಮನೆಗಳು ಸಮುದ್ರ ಪಾಲಾದರೆ 49 ಮನೆಗಳನ್ನು ಅಪಾಯದಂಚಿನಲ್ಲಿರುವ ಮನೆಗಳು ಎಂದು ಗುರುತಿಸಲಾಗಿದೆ. ಸೋಮೇಶ್ವರದಲ್ಲೂ 7 ಮನೆಗಳನ್ನು ಗುರುತಿಸಲಾಗಿದೆ.
ಕಡಲ್ಕೊರೆತದ ಹಿನ್ನಲೆಯಲ್ಲಿ ಉಳ್ಳಾಲಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದರು.ಕಡಲ್ಕೊರೆತ ತೀವ್ರಗೊಂಡಿರುವ ಕೈಕೋ, ಕಿಲೇರೀಯ, ಸೋಮೇಶ್ವರ, ಉಚ್ಚಿಲ ಪ್ರದೇಶಗಳಿಗೆ ತೆರಳಿದ ಸಚಿವರು ಪರಿಶೀಲನೆ ನಡೆಸಿದರು. ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಇದೇ ಸಂದರ್ಭ ಸಚಿವರು ನೀಡಿದರು.
ಉಳ್ಳಾಲ ಕಿಲೇರಿಯಾ ನಗರದಲ್ಲಿ ಹಮೀದ್ , ಬದ್ರುನ್ನೀಸಾ, ಖತೀಜಮ್ಮ,ಸೆಬಿನಾ, ಜೈನಾಬ್ ಅವರ ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಕೈಕೋ , ಕಿಲೇರಿಯಾ ನಗರ , ಮೋಗವೀರಪಟ್ನ , ಸಿಗ್ರೌಂಡ್ ಸೇರಿದಂತೆ 49 ಮನೆಗಳು ಮತ್ತು ಎರಡು ಮತ್ತು ಎರಡು ಮಸೀದಿಗಳು ಅಪಾಯದಂಚಿನಲ್ಲಿದೆ. ಸಮ್ಮರ್ ಸ್ಯಾಂಡ್ ಬೀಚ್ ಗೆ ಸೇರಿದ್ದ ಎರಡು ಶೌಚಾಲಯ ಕಟ್ಟಡಸಮುದ್ರ ಪಾಲಾಗಿದೆ. ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ಕೊರೆತ ಹೆಚ್ಚಿದ್ದು 7 ಮನೆಗಳು ಅಪಾಯದಂಚಿನಲ್ಲಿದೆ . ಉಚ್ಚಿಲ ಮತ್ತು ಸೋಮೇಶ್ವರ ಉದ್ದಕ್ಕೂ ಸಮುದ್ರ ತಟದಲ್ಲಿ ಇರುವ ಮರಗಳು ಸಮುದ್ರಪಾಲಾಗಿವೆ.
ಸಚಿವ ಖಾದರ್ ಭೇಟಿ ಸಂದರ್ಭ ಅಧಿಕಾರಿಗಳು, ಕಮಿಷನರ್ ಸಂದೀಪ್ ಪಾಟೀಲ್ ಹಾಗೂ ಜನಪ್ರತಿನಿಧಿಗಳು ಅವರು ಜೊತೆಗಿದ್ದರು.