ಕಾಸರಗೋಡು ಡಿ 4 : ಅಡವಿಟ್ಟ ಚಿನ್ನಾಭರಣವನ್ನು ಮರಳಿ ನೀಡುವಂತೆ ನಗರ ಹೊರವಲಯದ ಕೂಡ್ಲು ಸೇವಾ ಸಹಕಾರಿ ಬ್ಯಾಂಕ್ ಗೆ ಗ್ರಾಹಕರು ಡಿ 4 ರಂದು ಸೋಮವಾರ ಬೆಳಿಗ್ಗೆಯಿಂದ ದಿಗ್ಬಂಧನ ಹಾಕಿದ್ದು , ಇದರಿಂದ ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್ ಪ್ರವೇಶಿಸಲು ಸಾಧ್ಯವಾಗಿಲ್ಲ.2001 ಮತ್ತು 2015 ರಲ್ಲಿ ಎರಡು ಬಾರಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಈ ಬ್ಯಾಂಕ್ ನಿಂದ ದರೋಡೆಗೊಳಗಾಗಿತ್ತು. 2001 ರಲ್ಲಿ ನಡೆದ ದರೋಡೆ ಬಳಿಕ 153 ಗ್ರಾಹಕರು , 2015 ರಲ್ಲಿ ನಡೆದ ದರೋಡೆ ಬಳಿಕ ೮೮೦ ಮಂದಿಗೆ ಅಡವಿಟ್ಟ ಚಿನ್ನಾಭರಣ ಮರಳಿಸಲು ಸಾಧ್ಯವಾಗಿಲ್ಲ ಎಂದು ಗ್ರಾಹಕರು ದೂರಿದ್ದಾರೆ.ಹಲವು ಪ್ರತಿಭಟನೆಯ ಪರಿಣಾಮ ಅಡವಿಟ್ಟ ಚಿನ್ನಾಭರಣವನ್ನು ಅಕ್ಟೊಬರ್ 30 ರೊಳಗೆ ಮರಳಿಸುವುದಾಗಿ ಬ್ಯಾಂಕ್ ಅಧಿಕಾರಿಗಳು ಭರವಸೆ ನೀಡಲಾಗಿತ್ತು.ಆದರೆ ಇದುವರೆಗೆ ಚಿನ್ನಾಭರಣ ಮರಳಿಸಲು ಮುಂದಾಗದಿರುವುದನ್ನು ಪ್ರತಿಭಟಿಸಿ ಗ್ರಾಹಕರು ಬ್ಯಾಂಕ್ ಗೆ ದಿಗ್ಬಂಧನ ಹಾಕಿದ್ದಾರೆ.
ಇನ್ನು ನವೆಂಬರ್ ತಿಂಗಳ 30 ರಂದು ಬ್ಯಾಂಕ್ ಕಾರ್ಯದರ್ಶಿ ನಿವೃತ್ತಿ ಹೊಂದಿದ್ದು , ಇದರಿಂದ ಚಿನ್ನಾಭರಣ ಲಭಿಸುವ ಸಾಧ್ಯತೆ ಕಡಿಮೆ ಎಂಬ ಅನುಮಾನ ಗ್ರಾಹಕರಲ್ಲಿ ಉಂಟಾಗಿದೆ.ಬಾಂಡ್ ಕಟ್ಟಿದರೆ ಮಾತ್ರ ಚಿನ್ನಾಭರಣ ಮರಳಿಸಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದರೂ ಗ್ರಾಹಕರು ಇದಕ್ಕೆ ಒಪ್ಪಲಿಲ್ಲ. ಬ್ಯಾಂಕ್ ನ ಭದ್ರತೆಯಲ್ಲಿ ಲೋಪವಿದ್ದು ಇದೇ ದರೋಡೆಗೆ ಕಾರಣ ಎಂದು ಇನ್ಸೂರೆನ್ಸ್ ನೀಡಲು ವಿಮಾ ಕಂಪೆನಿ ನಿರಾಕರಿಸಿದೆ ಎನ್ನಲಾಗಿದೆ. ಹೀಗಾಗಿ ಚಿನ್ನಾಭರಣ ಮರಳಿಸುವುದು ಕಷ್ಟದಾಯಕವಾಗಿದೆ. ಜತೆಗೆ ದರೋಡೆಗೊಳಗಾದ ಬಹುತೇಕ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರೂ . ಕಾನೂನು ಹೋರಾಟ ನಡೆಯುತ್ತಿರುವುದರಿಂದ ಚಿನ್ನಾಭರಣ ಗ್ರಾಹಕರಿಗೆ ಮರಳಿಸುವಲ್ಲಿ ಗೊಂದಲ ಮೂಡಿದೆ ಎನ್ನಲಾಗುತ್ತಿದೆ.