ಬಂಟ್ವಾಳ, ಮಾ.05(DaijiworldNews/AK): ಸಾಮರ್ಥ್ಯ ಪರೀಕ್ಷೆಯ ಬಳಿಕ ಸಂಚಾರ ಸಾಧ್ಯವಿಲ್ಲ ಎಂದು ಜಿಲ್ಲಾಡಳಿತ ನಿಷೇಧ ಹೇರಿದ ಬಳಿಕ ಘನ ವಾಹನಗಳಿಗೆ ಸಂಚಾರಕ್ಕೆ ಬ್ರೇಕ್ ಬಿದ್ದಿರುವ ಪೊಳಲಿ ಸಮೀಪದ ಅಡ್ಡೂರು ಸೇತುಯಲ್ಲೀಗ ರಾತ್ರಿ ಹೊತ್ತು ಘನ ವಾಹನಗಳು ಸಂಚರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗುತ್ತಿದೆ.

ಪೊಳಲಿ ಸೇತುವೆಯನ್ನು ಹಗಲು ಹೊತ್ತು ಬಂದ್ ಮಾಡಿ ,ರಾತ್ರಿ ವ್ಯವಹಾರ ಕುದುರಿಸುವ ಅಧಿಕಾರಿಗಳಿಗೆ ಧಿಕ್ಕಾರವಿರಲಿ.....ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದೆ ಆಡಳಿತ ವರ್ಗ....ಜಿಲ್ಲಾಧಿಕಾರಿಯವರೇ ,ಈ ವ್ಯವಹಾರಕ್ಕೆ ನೇರ ನೀವೆ ಹೊಣೆ....ನಾಟಕ ನಿಲ್ಲಿಸಿ,.. ಶಾಲಾ ವಾಹನಗಳಿಗೆ ,ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಘನವಾಹನಕ್ಕೆ ಹಗಲು ಹೊತ್ತು ಸೇತುವೆಯನ್ನು ತೆರವುಗೊಳಿಸಿ ...ಈ ರೀತಿಯ ಬರಹದ ಸಂದೇಶ ಹಾಗೂ ಲಾರಿಯೊಂದು ಸೇತುವೆ ಮೂಲಕ ಆರಾಮವಾಗಿ ಯಾರ ವಿರೋಧವೂ ಇಲ್ಲದೆ ಸಂಚರಿಸುವ ವಿಡಿಯೋವನ್ನು ಇಲ್ಲಿನ ಸ್ಥಳೀಯ ನಿವಾಸಿ ಹೆಸರು ಸಹಿತ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾನೆ.
ಅದು ಇದೀಗ ಸಖತ್ ವೈರಲ್ ಆಗುತ್ತಿದೆ.
ಮಂಗಳೂರು ವ್ಯಾಪ್ತಿಯಲ್ಲಿ ಬರುವ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಅಡ್ಡೂರು ಸೇತುವೆಯ ದೈಹಿಕ ಸಾಮಾರ್ಥ್ಯ ಕುಸಿದಿದೆ ಎಂಬ ಕಾರಣಕ್ಕಾಗಿ ಜಿಲ್ಲಾಡಳಿತದ ಅದೇಶದಂತೆ ತಾಂತ್ರಿಕವಾದ ವ್ಯವಸ್ಥೆಯೊಂದಿಗೆ ಬೆಂಗಳೂರಿನಿಂದ ಆಗಮಿಸಿದ ತಂಡ ಸೇತುವೆಯ ಸಾಮಾರ್ಥ್ಯ ಪರೀಕ್ಷೆ ನಡೆಸಿತ್ತು.
ಬಳಿಕ ಸೇತುವೆಯಲ್ಲಿ ಘನವಾಹನಗಳ ಸಂಚಾರ ನಿಷೇಧ ಮಾಡುವಂತೆ ವರದಿ ಕೂಡ ನೀಡಿತ್ತು. ತಾಂತ್ರಿಕ ವಿಭಾಗದ ವರದಿಯನ್ನು ಆಧರಿಸಿ ಜಿಲ್ಲಾಡಳಿತ ಸೇತುವೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ತಡೆ ನೀಡಿ ಅದೇಶ ಹೊರಡಿಸಿದ್ದಲ್ಲದೆ, ಸೇತುವೆಯ ಎರಡು ಭಾಗದಲ್ಲಿ ಪೋಲಿಸ್ ಚೌಕಿಯನ್ನು ನಿರ್ಮಿಸಿ ಕಾವಲು ಕಾಯುವಂತೆ ಮತ್ತು ಘನ ವಾಹನ ಸಂಚಾರ ನಿಷೇಧಕ್ಕೆ ಗೇಟ್ ಅಳವಡಿಸಲಾಗಿತ್ತು.
ಆದರೆ ಜಿಲ್ಲಾಡಳಿತದ ಅದೇಶ ಕೇವಲ ಹಗಲು ಹೊತ್ತು ಸಂಚಾರ ಮಾಡುವ ಬಡವರ್ಗಕ್ಕೆ ಮಾತ್ರ ಅನ್ವಯಿಸುತ್ತದೆ ಎಂಬ ಆರೋಪ ಕೇಳಿ ಬಂದಿದ್ದು, ರಾತ್ರಿ ಹೊತ್ತು ಸೇತುವೆ ಮೂಲಕ ಅಕ್ರಮ ಮರಳು ವಾಹನಗಳು ಸಹಿತ ಘನ ವಾಹನಗಳ ಸಂಚಾರಕ್ಕೆ ಮುಕ್ತವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಗೊಂಡಿದ್ದು,ಈ ಬಗ್ಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಯಾವ ಕಾರಣದಿಂದಾಗಿ ಸೇತುವೆಯ ಬಲ ಕುಸಿತ ಕಂಡಿದೆಯಾ ? ಅದೇ ವ್ಯವಹಾರ ರಾತ್ರಿ ಹೊತ್ತು ಮತ್ತೆ ಲಂಗುಲಗಾಮಿಲ್ಲದೆ ನಡೆಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.