ಉಡುಪಿ, ಮಾ.05(DaijiworldNews/TA): ಶರಣೆಂದು ಬಂದವರಿಗೆ ಕೈ ಹಿಡಿದು ಆಶೀರ್ವದಿಸುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಕೊನೆಯ ದಿನವಾದ ಬುಧವಾರದಂದು ಶ್ರೀ ಮಾರಿಯಮ್ಮನ ದೇವರಿಗೆ ಮಹಾಬ್ರಹ್ಮಕಲಶಾಭಿಷೇಕ ನಡೆಸುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.








ಪವಿತ್ರ ಬ್ರಹ್ಮಕಲಶೋತ್ಸವವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ನೆರೆದಿದ್ದರು. ವೇದಮೂರ್ತಿ ಕೆ.ಜಿ.ರಾಗವೇಂದ್ರ ತಂತ್ರಿ ಅವರ ಮಾರ್ಗದರ್ಶನದಲ್ಲಿ ವಿದ್ವಾನ್ ಕೆ.ಪಿ.ಕುಮಾರಗುರು ತಂತ್ರಿ ಹಾಗೂ ಇತರ ಅರ್ಚಕರ ನೇತೃತ್ವದಲ್ಲಿ ಮಹಾ ಬ್ರಹ್ಮಕಲಶಾಭಿಷೇಕ ನಡೆಯಿತು.
ಬೆಳಿಗ್ಗೆ 8 ಗಂಟೆಗೆ ಮಂಗಳ ಗಣಯಾಗ, ಶಾಂಭವಿ ಕಾಳಮಾತೃಕಾರಾಧನೆ, ಕಾಳರಾತ್ರಿ ಕಾಳಮಾತೃಕಾರಾಧನೆ, ಮಂಡಲಾಚರಣೆಯೊಂದಿಗೆ ಮಹಾ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ವಿಧಿವಿಧಾನಗಳು ಮಾರಿಯಮ್ಮ ದೇವಿಯ ಬ್ರಹ್ಮಕಲಶಾಭಿಷೇಕದೊಂದಿಗೆ ಮುಕ್ತಾಯಗೊಂಡವು.
ಒಂದು ಚಿನ್ನದ ಕೆತ್ತಿದ ಬೆಳ್ಳಿ ಬ್ರಹ್ಮಕಲಶ, ಒಂಬತ್ತು ಬೆಳ್ಳಿ ಬ್ರಹ್ಮಕಲಶ, ಒಂಬತ್ತು ಬೆಳ್ಳಿ ದ್ರವ್ಯ ಕಲಶ, 88 ಬೆಳ್ಳಿ ಕಲಶ, ಮತ್ತು 901 ತಾಮ್ರ ಕಲಶಗಳು ಸೇರಿದಂತೆ ಒಟ್ಟು 1,008 ಕಲಶಗಳನ್ನು ವಿತರಿಸಲಾಯಿತು. ದೇವಾಲಯವು ಹೂವುಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟಿತ್ತು ಮತ್ತು 50,000 ಕ್ಕೂ ಹೆಚ್ಚು ಭಕ್ತರು ಮಾರಿಯಮ್ಮ ದೇವಿಯ ಆಶೀರ್ವಾದವನ್ನು ಪಡೆದು ಪುಣೀತರಾದರು.
ಈ ಸಂದರ್ಭದಲ್ಲಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಅವರು ಕೆ. ವಾಸುದೇವ್ ಶೆಟ್ಟಿ ಅವರಿಗೆ 'ರಾಜಋಷಿ' ಬಿರುದನ್ನು ಪ್ರದಾನ ಮಾಡಿದರು. ನವನೀತ್ ಶೆಟ್ಟಿ ಬರೆದಿರುವ "ಮಾರಿಯಮ್ಮ" ಪುಸ್ತಕವನ್ನು ಕೆ ವಾಸುದೇವ್ ಶೆಟ್ಟಿ ಬಿಡುಗಡೆ ಮಾಡಿದರು. ಮಹಾ ಬ್ರಹ್ಮಕಲಶಾಭಿಷೇಕದ ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.