ಉಳ್ಳಾಲ ಡಿ 04: ಸೇವಾ ಮನೋಭಾವನೆಯ ಭಾರತೀಯ ಮಹಿಳೆಯರನ್ನು ಸಬಲೀಕರಣಗೊಳಿಸುವ ಸಲುವಾಗಿ ಭಾರತ ಸರಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದಕ್ಕೆ ಪೂರಕವಾಗಿ ನಿಟ್ಟೆ ವಿ.ವಿ, ಜಪಾನಿನ ವಿ.ವಿ ಜತೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಸೇವಾ ವೃತ್ತಿ ನಡೆಸುವ ದಾದಿಯರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ ಎಂದು ಜಪಾನಿನ ಮಿಯಾಝಕಿ ವಿಶ್ವವಿದ್ಯಾಲಯದ ನರ್ಸಿಂಗ್ ವಿಜ್ಞಾನ ಸಂಸ್ಥೆಗಳ ಡೀನ್ ಡಾ. ಮಸಟೋಕಿ ಕನೇಕೋ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ವಿಶ್ವವಿದ್ಯಾನಿಲಯದ ನಿಟ್ಟೆ ಉಷಾ ನರ್ಸಿಂಗ್ ವಿದ್ಯಾ ಸಂಸ್ಥೆಗಳ ಬೆಳ್ಳಿ ಹಬ್ಬದ ಸಂಭ್ರಮವಾಗಿ ‘ಸಮ್ಯತಾ -೨೫’ ಕಾರ್ಯಕ್ರಮಕ್ಕೆ ಪಾನೀರು ಕಾಲೇಜು ಕ್ಯಾಂಪಸ್ಸಿನಲ್ಲಿ ಶನಿವಾರ ಚಾಲನೆ ನೀಡಿ ಮಾತನಾಡಿದರು.
ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಬೆರೆಯಲು ಭಾರತ ಸರಕಾರ ಉತ್ತಮ ಅವಕಾಶಗಳನ್ನು ಒದಗಿಸುತ್ತಿದೆ. ಇದರಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಸಲುವಾಗಿ ಶಕ್ತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಮೂಲಕ ಭಾರತೀಯ ಮಹಿಳೆಯರು ಸೇವಾ ಕಾರ್ಯದಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಪಾನಿನ ಮಿಯಝಾಕಿ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಡಾ.ಹರೀಶ್ ಕುಮಾರ್ ಮಧ್ಯಸ್ಥ ಮಾತನಾಡಿ ನರ್ಸಿಂಗ್ ವಿಭಾಗ ಇಡೀ ಆರೋಗ್ಯ ವ್ಯವಸ್ಥೆಯಲ್ಲಿ ವಿಶಿಷ್ಟ ಭಾಗವಾಗಿದೆ. ನಿಟ್ಟೆ ವಿ.ವಿ ಹಾಗೂ ಮಿಯಾಝಕಿ ವಿ.ವಿ ನಡುವಿನ ಒಪ್ಪಂದವನ್ನು ಯಶಸ್ವಿಗೊಳಿಸಲು ವಿದ್ಯಾರ್ಥಿ ಸಮೂಹ ಪ್ರಯತ್ನಿಸಬೇಕಿದೆ. ದೇಶದ ಜಾರ್ಖಂಡ್, ತೆಲಂಗಾಣ, ಆಂಧ್ರಪ್ರದೇಶದ ವಿವಿಧ ವಿ.ವಿಗಳ ಜತೆಗೂ ಜಪಾನಿನ ವಿ.ವಿ ಒಪ್ಪಂದಕ್ಕೆ ಮುಂದಾಗಿದ್ದು, ಈ ಮೂಲಕ ಆರೋಗ್ಯ ಕುರಿತ ಎಲ್ಲಾ ವಿಭಾಗಗಳು ಉತ್ತಮವಾಗಿ ಕಾರ್ಯಾಚರಿಸಿ ಉತ್ತಮ ಸಮಾಜವನ್ನು ನಿರ್ಮಿಸಲಿ ಅನ್ನುವ ಉದ್ದೇಶವನ್ನು ಮಿಯಾಝಕಿ ವಿ.ವಿ ಅಧ್ಯಕ್ಷ ಪ್ರೊ.ಇಕನೋವೆ ಹೊಂದಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಮಾತನಾಡಿ ದಾದಿಯರಿಲ್ಲದೆ ವೈದ್ಯರ ಸೇವೆ ನಗಣ್ಯ. ಕಲಿತ ಶಿಕ್ಷಣ ಸಂಸ್ಥೆಯ ಹೆಸರನ್ನು ಉತ್ತುಂಗಕ್ಕೇರಿಸಲು ದಾದಿಯರು ಕಾರ್ಯದಲ್ಲಿ ಉತ್ತಮ ಸೇವೆಯನ್ನು ನೀಡಬೇಕಾಗಿದೆ. ರೋಗಿಗಳನ್ನು ಮಾನವೀಯತೆ ದೃಷ್ಟಿಯಿಂದ ನೋಡುವ ಮನೋಭಾವವನ್ನು ಬೆಳೆಸಿಕೊಂಡಲ್ಲಿ ಕಾರ್ಯಕ್ಷೇತ್ರದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.
ಈ ಸಂದರ್ಭ ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ .ಬಿ ಉಪಸ್ಥಿತರಿದ್ದರು.ಬೆಳ್ಳಿ ಹಬ್ಬ ವರ್ಷದ ಶೈಕ್ಷಣಿಕ ಹಾಗೂ ಪಠ್ಯೇತರ ಕುರಿತ ಸ್ಮರಣ ಸಂಚಿಕೆಯನ್ನು ಡಾ.ಕನೇಕೋ ಬಿಡುಗಡೆಗೊಳಿಸಿದರು. ೨೫ ವರ್ಷಗಳ ನರ್ಸಿಂಗ್ ಕಾಲೇಜು ನಡೆದು ಬಂದ ದಾರಿ , ಸಂಸ್ಥೆಯ ಸೌಲಭ್ಯ, ಹಾಗೂ ಸೇವೆಯನ್ನು ವಿಶ್ಲೇಷಿಸುವ ಸಾಕ್ಷ್ಯಚಿತ್ರವನ್ನು ಎನ್.ವಿನಯ್ ಹೆಗ್ಡೆ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ಪ್ರಾಂಶುಪಾಲೆ ಡಾ.ಫಾತಿಮಾ ಡಿಸಿಲ್ವಾ, ಪ್ರೊ. ಫಿಲೋಮಿನಾ ಪೆರ್ನಾಂಡಿಸ್, ಪ್ರೊ.ಶೈನೀ ಪೌಲ್, ಸಹಾಯಕ ಪ್ರಾಧ್ಯಾಪಕರಾದ ಲತಾ, ನಳಿನಿ ಹಾಗೂ ಗ್ರಂಥಪಾಲಕಿ ಜಾನ್ವಿ ಹಾಗೂ ವಿಜಯ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಹಾಗೂ ಉತ್ತಮ ಸೇವೆಗೈದ ಬೋಧಕ ಸಿಬ್ಬಂದಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.