Karavali
ಕಾರ್ಕಳದಲ್ಲೊಂದು ಗಂಡು ಕುದುರೆ 'ರಾಂಚೋ '!
- Thu, Mar 06 2025 04:09:14 PM
-
ಕಾರ್ಕಳ, ಮಾ.06 (DaijiworldNews/AA): ಕುದುರೆ ಎಂದಾಗ ಅದನ್ನು ನೋಡಬೇಕೆಂದಾಗುತ್ತದೆ. ಅದರ ಬಾಲ ನೆನಪಾಗುತ್ತದೆ.ಅದರ ವೇಗದ ನಡಿಗೆಯ ಅಂದ ಕಣ್ಣಿಗೆ ಕಾಣುತ್ತದೆ. ಕುದುರೆ ಓಡುವ ರಭಸ ನಮ್ಮ ಕಣ್ಣರೆಪ್ಪೆಯನ್ನೆ ಅಗಲಿಸಿಡುತ್ತದೆ. ಕುದುರೆಯನ್ನು ನಾವೆಲ್ಲ ಸಿನೆಮಾದಲ್ಲಿ, ಪ್ರಾಣಿ ಸಂಗ್ರಹಾಲಯದಲ್ಲಿ ಕಾಣುವುದೇ ಹೆಚ್ಚು.
ಕಾರ್ಕಳದಲ್ಲಿರುವ ಕುದುರೆ ಅದು ರೇಸಿನ ಕುದುರೆ. ಕುದುರೆ ರೇಸಲ್ಲಿ ಭಾಗವಹಿಸುತ್ತಿದ್ದ, ಬಹುಮಾನ ಪಡೆಯುತ್ತಿದ್ದ ಕುದುರೆ. ಕಂದು ಮೈಬಣ್ಣದ, ನುಣುಪಾದ ಕೂದಲ ಹೊಳಪಿನ ಕುದುರೆ.
ವಿದೇಶಿ ತಳಿಯ ಕುದುರೆ. ಮೈಸೂರಿನಿಂದ ತಂದ ಕುದುರೆ. ಹೆಚ್ಚಾಗಿ ವಿದೇಶಿ ತಳಿಯ ಕುದುರೆಗಳೇ ರೇಸಿನಲ್ಲಿ ಭಾಗವಹಿಸುವುದು. ಅದರಲ್ಲೂ ತರಹೇವಾರಿ ತಳಿಗಳಿದ್ದು ಅದಕ್ಕನುಸಾರವಾಗಿ ಬೆಲೆಯೂ ನಿಗದಿಯಾಗಿರುತ್ತದೆ.
ಕುದುರೆ ಸಾಕಬೇಕು ಎಂದು ಪ್ರತಿಯೊಬ್ಬರಿಗೂ ಮನಸ್ಸು ಹೇಳುತ್ತದೆ. ಅದರಂತೆ ಆನೆ ಸಾಕುವುದು, ಓಟದ ಕೋಣಗಳನ್ನು ಸಾಕುವುದು, ಎತ್ತುಗಳನ್ನು ಸಾಕುವ ಪ್ರತ್ಯೇಕ ಆಸಕ್ತಿಗಳು ಇದ್ದೇ ಇರುತ್ತದೆ.
ಕಾರ್ಕಳಕ್ಕೆ ಬಂದಿರುವ ಈ ಗಂಡು ಕುದುರೆ #ರಾಂಚಿಯ ಒಡೆಯ ಅಲ್ಲಿನ ಕಟೀಲ್ ಇಂಟರ್ ನೇಷನಲ್ ಹೊಟೇಲ್ ಮಾಲೀಕರಾಗಿರುವ ರೋಹಿತ್ ಕುಮಾರ್ ಕಟೀಲ್ ಅವರು.
ಹಿಂದೆ ಬ್ರಿಟಿಷ್ ದೊರೆಗಳಿಗೆ ಕುದುರೆಯೆ ವಾಹನವಾಗಿತ್ತು. ಚಿಕ್ಕಮಗಳೂರು, ಕೊಡಗು ಜಿಲ್ಲೆಯು ಪೂರ್ತಿಯಾಗಿ ಬ್ರಿಟಿಷ್ ದೊರೆಗಳ ಹಿಡಿತದಲ್ಲಿತ್ತು. ಕಾಫಿ,ಚಹ ಎಸ್ಟೇಟುಗಳೆಲ್ಲವೂ ಅವರದ್ದೇ ಆಗಿತ್ತು. ಆಗ ಅವರ ಬಂಗುಲೆಯಲ್ಲಿ ಕುದುರೆಗಳಿದ್ದು ಅದನ್ನು ಸವಾರಿಗೆ ಬಳಸುತ್ತಿದ್ದರು. ಕೆಲವು ಬ್ರಿಟಿಷ್ ಪಾದ್ರಿಗಳೂ ಕೂಡ ಕುದುರೆಯಲ್ಲಿ ಸವಾರಿ ಮಾಡುತ್ತಿದ್ದರು. ಬ್ರಿಟಿಷರು ಹೊರಟು ಹೋದ ನಂತರ ಎಸ್ಟೇಟುಗಳಲ್ಲಿ ಕುದುರೆಯಿರುವುದೂ ಮಾಯವಾಯಿತು.
ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿರುವ ರೋಹಿತ್ ಕುಮಾರ್ ಕಟೀಲು ಅವರಿಗೆ ಕುದುರೆಯ ನಂಟು ಬೇಕೆಂದಾಗಿದ್ದು ಸಹಜ ಆಸಕ್ತಿಯೇ ಸರಿ. ಸಮಯಗಳಿಂದ ಲಾಗಾಯ್ತು ಕುದುರೆ ಖರೀದಿಯ ಯೋಚನೆಯಲ್ಲಿದ್ದಾಗ ಈ ಕುದುರೆ ಲಭಿಸಿತು.
ರೇಸಿನ ಕುದರೆಗೆ ಏನೇ ಸಣ್ಣ ಪುಟ್ಚ ಗಾಯ ಅಥವಾ ನೋವು ಆಯಿತೆಂದಾದಾಗ ಅದನ್ನು ಮುಂದೆ ರೇಸಿನಲ್ಲಿ ಬಳಸುವುದಿಲ್ಲ. ಲಾಯದಲ್ಲೆ ಕಟ್ಟಿ ಸಾಕುತ್ತಾರೆ ಅಥವಾ ಕುದುರೆ ಸಾಕುವ ಹವ್ಯಾಸಿಗರು ಖರೀದಿಸುತ್ತಾರೆ. ಹಾಗೆ ಖರೀದಿಯಾದ ಕುದುರೆ ಈ ರಾಂಚಿ!
ಕಳೆದ ಎರಡು ವರ್ಷಗಳ ಹಿಂದೆಯೆ ತಂದು ಅದರ ಪ್ರೀತಿಪಾತ್ರರಾದ ರೋಹಿತ್ ಅವರ ಜೊತೆಗೆನೇ ಮಗ ಏಕಲವ್ಯನಿಗೂ ರಾಂಚಿಯ ನಂಟು ಹಿಡಿಯಿತು. ಅಕಾಡೆಮಿಯಲ್ಲಿರುವ ತರಬೇತುದಾರನಿಂದ ತರಬೇತಿ ಪಡೆದು ಕುದುರೆ ಸವಾರಿಗೆ ಅಭ್ಯಾಸ ಮಾಡಿದ್ದೂ ಆಯಿತು. ಕಳೆದ ಬಾರಿಯ ಸಾರ್ವಜನಿಕ ಚುನಾವಣೆ ಸಂದರ್ಭದಲ್ಲಿ ಏಕಲವ್ಯ ಕುದುರೆ ಏರಿ ಸವಾರಿ ಮಾಡಿಕೊಂಡು ಕಾರ್ಕಳ ಬೋರ್ಡ್ ಹೈಸ್ಕೂಲಿನ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಬಂದಿರುವುದು ಸೋಜಿಗದ ಸುದ್ದಿಯಾಗಿತ್ತು.ಸೆಲಬ್ರೆಟ್ಟಿ ಪ್ರಾಣಿಗಳ ಸಾಲಿನಲ್ಲಿ ಮೊದಲನೆಯದ್ದಾಗಿರುವುದೇ ಕುದುರೆ. ಅದಕ್ಕೆ ನಿತ್ಯವೂ ವ್ಯಾಯಮಾ ಬೇಕು,ಸ್ನಾನ ಆಗಬೇಕು, ಮಸಾಜು ಮಾಡಬೇಕು. ಅದಷ್ಟನ್ನು ತಪ್ಪಿಸುವಂತೆಯೇ ಇಲ್ಲ. ಅದಕ್ಕೆ ಇಬ್ಬರು ಕೆಲಸದವರು ಬೇಕೇ ಬೇಕು. ಕುದರೆಗೆ ವ್ಯಾಯಾಮ ಮತ್ತು ಮಸಾಜು ತಪ್ಪುವುದಕ್ಕೇ ಇಲ್ಲ.
ಮನೆಯ ತೆಂಗಿನ ತೋಟದಲ್ಲಿ ಅರ್ಧ ಘಂಟೆ ಸಮಯ ಹುಲ್ಲು ಮೇಯುತ್ತದೆ. ಸವಾರಿ ಮಾಡುವುದಕ್ಕೂ ವಿಶಾಲ ಜಾಗವಿದೆ. ಇನ್ನು ಕುದರೆಗೆ ನಡಿಗೆಯ ವ್ಯಾಯಾಮ ಹೇಗೆಂದರೆ ಅದನ್ನು ವೃತ್ತಾಕಾರವಾಗಿ ನಡೆಸುವುದು. ನಮಗದು ಓಡುವಂತೆ ಭಾಸವಾದರೂ ಅದು ಮಾತ್ರ ಅದರ ನಡಿಗೆ! ಹಗ್ಗದ ಒಂದು ತುದಿಯನ್ನು ಹಿಡಿದುಕೊಂಡು ನಡುವೆ ನಿಂತಿದ್ದರೆ ಅವನಿಗೆ ನಿರ್ಧಿಷ್ಟ ದೂರದಲ್ಲಿ ಸುತ್ತು ಬರುತ್ತದೆ. ಮತ್ತೊಬ್ಬ ಸಹಾಯಕನು ಕುದುರೆ ನಡೆಯುತ್ತಲೇ ಇರುವಂತೆ ಗದರಿಸುತ್ತಿರುತ್ತಾನೆ. ಸುಮಾರು ಒಂದು ತಾಸು ಹೊತ್ತು ಅದನ್ನು ಮಾಡಬೇಕಾಗುತ್ತದೆ.ಈ ಕುದುರೆ ಅದೆಷ್ಟು ಸಾಧು ಸ್ವಭಾವದ್ದೆಂದರೆ ಅಪರಿಚಿತನಿಗೂ ಏನೂ ಹಾಯುವುದಿಲ್ಲ. ಯಾರು ಕೂಡಾ ಮುಖ, ಕುತ್ತಿಗೆ, ಬೆನ್ನು ಸವರಬಹುದು. ಪುಟ್ಚ ಮಕ್ಕಳಿಗೂ ಈ ರಾಂಚಿ ತುಂಬಾ ಅಚ್ಚುಮೆಚ್ಚಿನ, ಮುದ್ದಿನ ಕುದುರೆಯಾಗಿದೆ.
ಕುದುರೆಯನ್ನು ಕ್ರಮಬದ್ಧವಾಗಿ ಸಾಕುವುದಕ್ಕೆ ತಿಂಗಳಿಗೆ ಸರಾಸರಿ ಎಪ್ಪತ್ತರಿಂದ ಎಂಭತ್ತು ಸಾವಿರ ತನಕ ಖರ್ಚು ಇದೆ. ಇಬ್ಬರು ಕೆಲಸದವರು ಜೊತೆಗೆ ಖಾಯಂ ಇರಬೇಕು.
ಕರಾವಳಿ ಪ್ರದೇಶದ ಬಿಸಿಲಿನ ಹವಾಮಾನ ಕುದುರೆಗಳಿಗೆ ಅಷ್ಟೊಂದು ಹಿಡಿಸುತ್ತಿಲ್ಲವಾದ್ದರಿಂದ ಅದಕ್ಕೆ ಮಸಾಜು,ಸ್ನಾನ, ಕುಡಿಯುವುದಕ್ಕೆ ನೀರು ಇತ್ಯಾದಿ ಆರೈಕೆ ಸದಾ ಇರಬೇಕಾಗುತ್ತದೆ. ಬೆಳಿಗ್ಗೆ ಏಳು ಘಂಟೆ ಸಮಯಕ್ಕೆನೆ ಹುಲ್ವು ಮೇಯಲು ತೋಟಕ್ಕೆ ಹೋಗುವುದು. ಸ್ವಲ್ಪ ಬಿಸಿಲು ಶಾಖ ಬೀಳುವುದಕ್ಕಾಗುವಾಗ ನೆರಳಿಗೆ ಹೋಗಿ ನಿಲ್ಲುವುದು.
ಈ ಕುದುರೆಗೆ ಇಂಗ್ಲೀಷ್ ಭಾಷೆ ಉಚ್ಚಾರಗಳೇ ಅರ್ಥವಾಗುತ್ತಿತ್ತು. ಈಗೀಗ ಕನ್ನಡ ಮತ್ತು ತುಳುವಿನಲ್ಲಿಯೇ ಎಲ್ಲ ನಿರ್ದೇಶನ ಕೊಡುವುತ್ತಿರುವುದರಿಂದ ಅದರ ಭಾಷೆ ಸ್ವಲ್ಪ ಮಟ್ಟಿಗೆ ಬದಲಾಗಿದೆ.
ಹೊಟೇಲ್ ಕಟೀಲ್ ಇಂಟರ್ ನೇಷನಲ್ ಅದರ ರಿಸೆಪ್ಶನ್ ಕೌಂಟರ್ ಎದರಿನ ಅಂಗಳದಲ್ಲಿಯೂ ರಾಂಚಿ ಆಗಾಗ ನಿಂತುಕೊಂಡಿರುತ್ತಾನೆ. ಅಲ್ಲಿಗೆ ಬಂದವರೊಡನೆ ತನ್ನ ಪ್ರೀತಿಯನ್ನು ವಿನಿಮಯ ಮಾಡಿಕೊಳ್ಳುತ್ತಿರುತ್ತಾನೆ.ಕುದುರೆಗೆ ಕೊಡುವ ಅದರದ್ದೇ ಆಹಾರ ಪಥ್ಯಗಳನ್ನೆ ಕೊಡಲಾಗುವುದು. ಸೇಬು ಹೊರತಾಗಿಸಿ ಬೇರಾವುದೇ ಹಣ್ಣನ್ನೂ ಈ ರಾಂಚಿ ತಿನ್ನುವುದಿಲ್ಲ.
ಸಾರ್ವಜನಿಕ ರಸ್ತೆಯಲ್ಲಿ ಕುದುರೆ ಏರಿ ಹೋಗುವುದು ಕಾನೂನುಬಾಹಿರವೇನಲ್ಲವಾದರೂ ಕೆಲವೊಂದು ಅಹಿತಕರ ಘಟನೆಗೆ ಕಾರಣವಾಗಕೂಡದೆನ್ನುವ ಮುನ್ನೆಚ್ಚರಿಕೆಯಲ್ಲಿ ವಾಹನ ದಟ್ಟಣೆಯ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುವುದು ಸರಿಯಾಗುತ್ತಿಲ್ಲವಷ್ಟೆ. ರೋಹಿತ್ ಕುಮಾರ್ ಅವರ ಮಗ ಏಕಲವ್ಯ ಅವರು ಕಾರ್ಕಳದ ಒಳನಾಡಿನ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾರೆ. ರೋಹಿತ್ ಕುಮಾರ್ ಕಟೀಲು ಅವರು ಮನೆಯ ತೋಟದ ಜಾಗದಲ್ಲಿ ಕುದುರೆ ಸವಾರಿ ಮಾಡಿ ಆನಂದ ಪಡೆಯುತ್ತಾರೆ.
ಕಾರ್ಕಳಕ್ಕೊಂದು ವಿದೇಶಿ ಕುದುರೆಯನ್ನು ತಂದಿರುವ ರೋಹಿತ್ ಕುಮಾರ್ ಕಟೀಲು ಅವರ ಸಾಹಸಕ್ಕೆ ಎಲ್ಲರೂ ಮೆಚ್ಚುವಂಥದ್ದಾಗಿದೆ, ಅದನ್ನು ನೋಡುವ ಕುತೂಹಲ ಪ್ರತಿಯೊಬ್ಬರಲ್ಲೂ ಹೆಚ್ಚುತ್ತಲೆ ಇದೆ. ಆ ನಿಟ್ಚಿನಲ್ಲಿ ಅವರು ಅಭಿನಂದನಾರ್ಹರು ಎನ್ನಬೇಕು.
-ವಿ. ಕೆ. ವಾಲ್ಪಾಡಿ