ಬಂಟ್ವಾಳ, ಜೂ 14 (Daijiworld News/MSP): ಗ್ರಾಮಗಳಲ್ಲಿರುವ ನೀರಿನ ಸಂಕಷ್ಟಗಳನ್ನು ಮತ್ತಷ್ಟು ದೂರಮಾಡುವ ಜೊತೆಗೆ ಗ್ರಾಮ, ಗ್ರಾಮಗಳನ್ನು ಬೆಸುಗೆ ಪಶ್ಚಿಮವಾಹಿನಿ ಯೋಜನೆಯ ಆಶಯವಾಗಿದ್ದು, ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಿ ಜಿಲ್ಲೆಗೆ ಸಿಕ್ಕಿದ ಕೊಡುಗೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಅವರು ಶುಕ್ರವಾರ ಕರಿಯಂಗಳ ಗ್ರಾಮದ ಪೊಳಲಿ, ಕರ್ಪೆ ಗ್ರಾಮದ ತೋಟ ಹಾಗೂ ಪುಚ್ಚಮೊಗರುವಿನ ಮಂಜಲ್ದೊಟ್ಟುವಿನಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಅಣೆಕಟ್ಟು ನಿರ್ಮಾಣ ಕಾಮಗಾರಿಯ ಪ್ರಗತಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಪಶ್ಚಿಮಾಭಿಮುಖವಾಗಿ ಹರಿಯವ ನದಿಗಳಿಗೆ ಅಲ್ಲಲ್ಲಿ ಚೆಕ್ಡ್ಯಾಂಗಳನ್ನು ನಿರ್ಮಿಸಿ ನೀರಿನ ಸಂಗ್ರಹಣೆ, ಅಂತರ್ಜಲ ಹೆಚ್ಚಿಸುವುದು ಹಾಗೂ ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸುವ ಪಶ್ಚಿಮವಾಹಿನಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ದ.ಕ. ಜಿಲ್ಲೆಗೆ 265 ಕೋಟಿ ರೂ. ಮಂಜೂರಾಗಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಫಲ್ಗುಣಿ ನದಿಗೆ ಮೂರು ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣಗೊಳ್ಳಲಿದೆ. ಉಡುಪಿಗೆ 80 ಕೋಟಿ ರೂ. ಹಾಗೂ ಉತ್ತರ ಕನ್ನಡ ಜಿಲ್ಲೆಗೆ ೫೦ ಕೋಟಿ ರೂ. ಮಂಜೂರಾತಿಯಾಗಿದೆ ಎಂದು ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಬಂಟ್ವಾಳಕ್ಕೆ 3 ಕಿಂಡಿಅಣೆಕಟ್ಟುಗಳು:
ಪುಚ್ಚಮೊಗರುವಿನ ಮಂಜಲ್ದೊಟ್ಟುವಿನಲ್ಲಿ 7 ಕೋಟಿ ರೂ. ಅಣೆಕಟ್ಟು ಮತ್ತು ಸೇತುವೆ, ಕರ್ಪೆ ಗ್ರಾಮದ ತೋಟ ಎಂಬಲ್ಲಿ 15 ಕೋಟಿ ರೂ. ಕಿಂಡಿ ಅಣೆಕಟ್ಟು ಮತ್ತು ಸೇತುವೆ, ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿ 12.5 ಕೋಟಿ ರೂ. ವೆಚ್ಚದ ಅಣೆಕಟ್ಟು ಮತ್ತು ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿದೆ ಎಂದು ರೈ ಹೇಳಿದರು.
2 ಅಣೆಕಟ್ಟುಗಳ ಕಾಮಗಾರಿ ಆರಂಭ:
ಪುಚ್ಚಮೊಗರು, ಕರಿಯಂಗಳ ಗ್ರಾಮದಲ್ಲಿ ಈಗಾಗಲೇ ಅಣೆಕಟ್ಟು ಕಾಮಗಾರಿಗಳ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಕರ್ಪೆ ಗ್ರಾಮದ ತೋಟ ಎಂಬಲ್ಲಿನ ಕಾಮಗಾರಿಯ ವಿನ್ಯಾಸದ ಬದಲಾವಣೆಗಾಗಿ ಮತ್ತೆ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತರಿಗೆ ಅನುಕೂಲವಾಗಲಿದೆ. ಪುಚ್ಚಮೊಗರುವಿನಲ್ಲಿ ನಿರ್ಮಾಣಗೊಳ್ಳುವ ಕಿಂಡಿ ಅಣೆಕಟ್ಟಿನಿಂದ ಸಂಗಬೆಟ್ಟು ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬೇಸಿಗೆಯಲ್ಲಿ ನೀರಿನ ಕೊರತೆ ನೀಗಲಿದೆ. ಜಾತ್ರೋತ್ಸವ ಸಂದರ್ಭದಲ್ಲಿ ಮಳಲಿಯಿಂದ ಪೊಳಲಿ ದೇವಸ್ಥಾನಕ್ಕೆ ಭಂಡಾರವನ್ನು ದೋಣಿಯ ಮೂಲಕ ನದಿ ದಾಟಿ ತರಬೇಕಾದ ಸನ್ನಿವೇಷ ಇದ್ದು, ಪೊಳಲಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣಗೊಂಡರೆ ಈ ಸಮಸ್ಯೆಗೂ ಪರಿಹಾರ ಸಿಗಲಿದೆ ಎಂದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕುಕ್ಕಿಪಾಡಿ ಗ್ರಾಪಂ ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ಸದಸ್ಯ ದೇವಪ್ಪ ಕರ್ಕೇರಾ, ಚಂದ್ರಹಾಸ ಪಲ್ಲಿಪ್ಪಾಡಿ, ಜಗದೀಶ್ ಕೊಯಿಲಾ, ಶಿವಾನಂದ ರೈ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ಗಳಾದ ಕೃಷ್ಣಕುಮಾರ್, ಪ್ರಸನ್ನ ಮೊದಲಾದವರು ಹಾಜರಿದ್ದರು.