ಉಡುಪಿ, ಮಾ.08 (DaijiworldNews/AA): ಉಡುಪಿ ನಗರದ ಜಾಮೀಯಾ ಮಸೀದಿ ರಸ್ತೆ ಪ್ರದೇಶದಲ್ಲಿ ಮ್ಯಾನ್ಹೋಲ್ ತೆರೆಯಲ್ಪಟ್ಟು ಕೊಳಚೆ ನೀರು ರಸ್ತೆಯಲ್ಲಿ ಹರಿದಿರುವ ಘಟನೆ ನಡೆದಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೀವ್ರ ತೊಂದರೆ ಉಂಟಾಗಿದೆ.


ಈ ರಸ್ತೆ ಪ್ರತಿನಿತ್ಯ ನೂರಾರು ಜನರು ಸಂಚರಿಸುವುದರ ಜೊತೆಗೆ, ಶಾಪಿಂಗ್ ಮಾಲ್ಗಳು ಮತ್ತು ವ್ಯಾಪಾರ ಮಳಿಗೆಗಳ ಪ್ರಮುಖ ಸ್ಥಳವಾಗಿರುವುದರಿಂದ ಸಾರ್ವಜನಿಕರು ಪರಿಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಳಚೆ ನೀರಿನ ದುರ್ವಾಸನೆ ತಾಳಲಾರದೆ ನಾಗರಿಕರು ಮೂಗು ಮುಚ್ಚಿಕೊಂಡು ನಡೆದು ಹೋಗುವ ಸ್ಥಿತಿಯಲ್ಲಿದ್ದಾರೆ.
ಘಟನೆಯ ಬಗ್ಗೆ ಸಾರ್ವಜನಿಕರು ನಗರಸಭಾ ಕಮಿಷನರ್ ಹಾಗೂ ಪರಿಸರ ಇಂಜಿನಿಯರ್ ಅವರಿಗೆ ದೂರು ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ ತಕ್ಷಣದ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.