ಮಂಗಳೂರು, ಮಾ.9(DaijiworldNews/TA): ನಗರದಲ್ಲಿ ಹೋರಾಟದ ರೂಪ ಪಡೆದಿದ್ದ 'ನೆಲ್ಲಿದಡಿ ಗುತ್ತು ಉಳಿಸಿ' ಹೋರಾಟ ನಡುವೆ ಡಿಸಿ ಕಚೇರಿಯಲ್ಲಿ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಆದರೆ ಯಾವುದೇ ಅಂತಿಮ ನಿರ್ಧಾರಕ್ಕೆ ಬಾರದೆ ಸಭೆ ಅಂತ್ಯವಾಗಿದೆ.

ಇನ್ನು ಹಲವು ಸಾಧ್ಯತೆಗಳ ಬಗ್ಗೆ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು. ಇದೇ ವೇಳೆ ದೇವಸ್ಥಾನದ ಪ್ರಮುಖರಿಂದ ಸಮಸ್ಯೆಗಳ ಬಗ್ಗೆ ಡಿಸಿ, ಸಂಸದರಿಗೆ ವಿವರಣೆ ನೀಡಲಾಯಿತು. ಈ ವೇಳೆ ಎಸ್ ಇಝಡ್ ಅಧಿಕಾರಿಗಳಿಂದ ಜಿಲ್ಲಾಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಸಾಧ್ಯತೆ ಕೇಳಿದರು. ದೈವದ ಪೂಜೆ, ವಿಧಿ ವಿಧಾನಗಳಿಗೆ ಅವಕಾಶ ನೀಡುವ ಬಗ್ಗೆ ಡಿಸಿ ಸೂಚನೆ ನೀಡಿದರು.
ಹೀಗಾಗಿ ಸಾಧ್ಯತೆಗಳ ವಿಚಾರದಲ್ಲಿ ಕ್ರಮ ವಹಿಸುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದರು ಎನ್ನಲಾಗಿದೆ. ಅಂತಿಮವಾಗಿ ಮತ್ತೆರಡು ದಿನಗಳ ಕಾಲ ಸಾಧ್ಯತೆಗಳ ಬಗ್ಗೆ ಪರಿಶೀಲನೆಗೆ ಅವಕಾಶ ನೀಡಲಾಗಿದೆ. ಸಭೆಯಲ್ಲಿ ಎಸ್ಇಝಡ್ ಅಧಿಕಾರಿಗಳು, ದ.ಕ ಡಿಸಿ ಮುಲ್ಲೈ ಮುಗಿಲನ್, ಶಾಸಕ ಉಮಾನಾಥ್ ಕೋಟ್ಯಾನ್, ನೆಲ್ಲಿದಡಿ ಗುತ್ತು ಪ್ರಮುಖರು ಭಾಗಿಯಾಗಿದ್ದರು. ಇನ್ನು ಈಗಾಗಲೇ ಮಾ.18ರಂದು ದೈವಸ್ಥಾನ ಉಳಿಸಲು ಬೃಹತ್ ಹೋರಾಟಕ್ಕೆ ದೈವಾರಾಧಕರು ಕರೆ ನೀಡಿದ್ದಾರೆ.