ಮಂಗಳೂರು ಡಿ 04: ಹುಣಸೂರಿನಲ್ಲಿ ಹನುಮ ಮಾಲಾಧಾರಿಗಳ ಮೇಲೆ ಲಾಠಿ ಝಳಪಿಸಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿದ ಪೊಲೀಸ್ ಅತಿರೇಕದ ಕ್ರಮ ಖಂಡಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಎಸ್ಪಿ ಕಚೇರಿ ಮುಂದೆ ಡಿ 4 ರ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹರೀಶ್ ಪೂಂಜಾ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಹಿಂದೂ ಧಮನಕಾರಿ ನೀತಿ ಅನುಸರಿಸುತ್ತಿದ್ದು ಇದಕ್ಕಾಗಿ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆಗೆ ಮುಂದಾದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಭಾನುವಾರ ತಡೆದಿದ್ದು ಮತ್ತು ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿದ್ದು ನಿಜಕ್ಕೂ ಖಂಡನೀಯ. ಸಿದ್ದರಾಮಯ್ಯ ಸರ್ಕಾರ ಪದೇ ಪದೇ ಹಿಂದೂ ಸಮುದಾಯಕ್ಕೆ ಮಾನಸಿಕವಾಗಿ ಘಾಸಿಗೊಳಿಸುತ್ತಿದ್ದಾರೆ ಎಂದು ಕಿಡಿಕಾರಿದರು .
ಈದ್ ಮಿಲಾದ್ ಹಾಗೂ ಹನುಮ ಜಯಂತಿ ಒಂದೇ ದಿನ ಇದ್ದ ಕಾರಣಕ್ಕಾಗಿ ಹುಣಸೂರಿನಲ್ಲಿ ನಿಷೇದಾಜ್ಞೆಯನ್ನು ಹೇರಲಾಗಿತ್ತು.
ಡಿ 3 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ನೇತೃತ್ವದಲ್ಲಿ ಬೆಳಗ್ಗೆಯೇ ಕಾರ್ಯಾಚರಣೆ ನಡೆಸಿ, ನಿಷೇದಾಜ್ಞೆಯ ನಡುವೆ ಮೆರವಣಿಗೆ ಮುಂದಾದ ಐವತ್ತಕ್ಕೂ ಅಧಿಕ ಹನುಮ ಭಕ್ತರನ್ನು ವಶಕ್ಕೆ ಪಡೆದಿದ್ದರು. ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.
ಪ್ರತಿಭಟನೆಯಲ್ಲಿ ಯುವ ಮೋರ್ಚಾದ ಮುಖಂಡ ಸಂದೀಪ್ ಶೆಟ್ಟಿ, ಯಶ್ ಪಾಲ್ , ಸುಜಿತ್, ಹರೀಶ್ ಮೂಡುಶೆಡ್ಡೆ ಮುಂತಾದವರು ಉಪಸ್ಥಿತರಿದ್ದರು.