ಬಂಟ್ವಾಳ, ಜೂ15(Daijiworld News/SS): ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಗುಡುಗು ಸಹಿತ ಮಳೆಯಾಗುತ್ತಿದ್ದು, ಜೂ.13ರಂದು ಸಂಜೆ ಮಿಂಚು ಬಡಿದು ತುಂಬೆ ಎರಡನೇ ಸ್ಥಾವರದ ಟ್ರಾನ್ಸ್ಫಾರ್ಮರ್ ಹಾನಿಗೀಡಾಗಿದೆ. ಈ ಹಿನ್ನಲೆಯಲ್ಲಿ, ನೀರು ರೇಶನಿಂಗ್ ಅಧಿಕೃತ ರದ್ಧತಿ ಪ್ರಕಟಣೆಗೆ ತಡೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜಿಲ್ಲೆಯಲ್ಲಿ ಕೆಲ ದಿನಗಳಿಂದ ಗುಡುಗು ಸಹಿತ ಮಳೆಯಾಗುತ್ತಿದ್ದು, ಜೂ.13ರಂದು ಸಂಜೆ ಮಿಂಚು ಬಡಿದು ತುಂಬೆ ಎರಡನೇ ಸ್ಥಾವರದ ಟ್ರಾನ್ಸ್ಫಾರ್ಮರ್ ಹಾನಿಗೀಡಾಗಿದೆ. ಸಿಡಿಲಾಘಾತಕ್ಕೆ ಟ್ರಾನ್ಸ್ಫಾರ್ಮರ್ ಕೆಟ್ಟು ಹೋಗಿರುವುದರಿಂದ ವಿದ್ಯುತ್ ಸಂಪರ್ಕ ಕಡಿದು ಹೋಗಿ ಒಂದು ಪಂಪ್ ಕೈಕೊಟ್ಟಿದೆ. ಟ್ರಾನ್ಸ್ಫಾರ್ಮರ್ ದುರಸ್ತಿ ಕಾರ್ಯಮೂಲ್ಕಿಯಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ರೇಶನಿಂಗ್ ರದ್ದುಪಡಿಸುವ ಅಧಿಕೃತ ಪ್ರಕಟಣೆಯನ್ನು ವಿಳಂಬ ಮಾಡಲಾಗಿದೆ ಎಂದು ಮಹಾ ನಗರ ಪಾಲಿಕೆ ಮೂಲಗಳು ತಿಳಿಸಿವೆ.
ಸದ್ಯ ತುಂಬೆ ವೆಂಟೆಡ್ ಡ್ಯಾಮ್ನಲ್ಲಿ ನೀರಿನ ಮಟ್ಟ 3.50 ಮೀಟರ್ಗೆ ಏರಿಕೆಯಾಗಿದೆ. ಇದರೊಂದಿಗೆ ಮಂಗಳೂರಿನ ಕುಡಿಯುವ ನೀರಿನ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರ ದೊರೆತಿದೆ.
ಜಿಲ್ಲೆಯಲ್ಲಿ ನೀರಿನ ಕೊರತೆಯಾಗಿರುವ ಹಿನ್ನೆಲೆಯಲ್ಲಿ, ಮಂಗಳೂರು ನಗರದಲ್ಲಿ ಏಪ್ರಿಲ್ 18ರಿಂದ ನೀರಿನ ರೇಶನಿಂಗ್ ಜಾರಿಗೊಳಿಲಾಗಿತ್ತು. ಇದರ ನಡುವೆ ಹಲವು ಬಾರಿ ರೇಶನಿಂಗ್ ಪರಿಷ್ಕರಣೆಗೊಳಗಾಗಿತ್ತು. ಪ್ರಸಕ್ತ ಪರಿಷ್ಕೃತ ರೇಶನಿಂಗ್ ಪ್ರಕಾರ ಜೂ.12ರ ಬೆಳಗ್ಗೆ 6 ಗಂಟೆ ವರೆಗೆ ಮಾತ್ರ ನಗರಕ್ಕೆ ನೀರು ಪೂರೈಕೆ ಇತ್ತು. ಆದರೆ ನೇತ್ರಾವತಿ ಜಲನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ನೀರು ಪೂರೈಕೆಯನ್ನು ಪಾಲಿಕೆ ಆಡಳಿ ಜೂ. 12ರ ಬೆಳಗ್ಗೆ 6 ಗಂಟೆಯ ಬಳಿಕವೂ ಮುಂದುವರಿಸಿದೆ ಎಂದು ತಿಳಿದುಬಂದಿದೆ.