ಮಂಗಳೂರು ಡಿ 4 : ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಸಿರಾಜ್ ಅಡ್ಕರೆಯವರ ನೇತೃತ್ವದಲ್ಲಿ ಡಿ 4 ರ ಸೋಮವಾರ ಗ್ರಾಮಾಂತರ ರಿಕ್ಷಾ ಚಾಲಕರಿಗೆ ಮಂಗಳೂರು ನಗರ ಪ್ರವೇಶ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬೃಹತ್ ಹಕ್ಕೊತ್ತಾಯ ಪ್ರತಿಭಟನಾ ಸಭೆ ತೊಕ್ಕೊಟ್ಟು ಜಂಕ್ಷನ್ನಲ್ಲಿ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯೋಗೀಶ್ ಶೆಟ್ಟಿ ಜಪ್ಪು, ಗ್ರಾಮಾಂತರ ರಿಕ್ಷಾ ಚಾಲಕರಿಗೆ ರಕ್ಷಣೆಯಾಗಿ ತುಳುನಾಡ ರಕ್ಷಣಾ ವೇದಿಕೆ ಸದಾ ಸಿದ್ಧವಾಗಿರುತ್ತದೆ. ನಮಗೆ ನಗರ ಪ್ರದೇಶದ ರಿಕ್ಷಾ ಚಾಲಕರ ಮೇಲೆ ಯಾವುದೇ ದ್ವೇಷವಿಲ್ಲ, ಆದರೆ ಬಡ ಗ್ರಾಮಾಂತರ ರಿಕ್ಷಾ ಚಾಲಕರಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ. ಒಬ್ಬ ರಿಕ್ಷಾ ಚಾಲಕ ಒಂದು ತಿಂಗಳು ದುಡಿದ ಸುಮಾರು 2000 ದಿಂದ 4000ದವರೆಗಿನ ಮೊತ್ತದ ಹಣವನ್ನು ನಗರ ಪ್ರವೇಶದ ಕಾರಣವನ್ನು ನೀಡಿ ವಸೂಲಿ ಮಾಡುತ್ತಿರುವುದು ಹಗಲು ದರೋಡೆಯಾಗಿದೆ. ಗ್ರಾಮಾಂತರ ರಿಕ್ಷಾ ಚಾಲಕರು ಅಗತ್ಯ ಕೆಲಸಗಳಿಗಾಗಿ, ಗ್ಯಾಸ್ ಹಾಕಿಸಲು, ರೋಗಿಗಳನ್ನು ಕರೆತರಲು ಮಂಗಳೂರಿಗೆ ಆಗಮಿಸಿದರೆ ಅವರ ಮೇಲೆ ದಂಡ ವಿಧಿಸುತ್ತಿರುವುದು ಅಕ್ಷಮ್ಯವಾಗಿದೆ. ಮುಂದಿನ ಒಂದು ವಾರದಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ತು.ರ.ವೇ ನೇತೃತ್ವದಲ್ಲಿ ಆರ್.ಟಿ.ಒ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಸಿರಾಜ್ ಅಡ್ಕರೆ ಮಾತನಾಡಿ , ನಗರ ಹಾಗೂ ಗ್ರಾಮೀಣ ಪ್ರದೇಶದ ರಿಕ್ಷಾ ಚಾಲಕರಿಗೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಲತಾಯಿ ಧೋರಣೆಯನ್ನು ಮಾಡುತ್ತಿರುವುದು ಆಕ್ಷಮ್ಯವಾಗಿದೆ. ಗ್ರಾಮಾಂತರ ರಿಕ್ಷಾ ಚಾಲಕರಿಗೆ ಅನ್ಯಾಯವಾದರೆ ಸುಮ್ಮನಿರಲು ನಾವು ತಯಾರಿಲ್ಲ. ಮಂಗಳೂರು ನಗರದ ನೇತ್ರಾವತಿ ಸೇತುವೆಯಿಂದ ತೊಕ್ಕೊಟ್ಟು ಉಳ್ಳಾಲ ದೇರಳಕಟ್ಟೆ ಸೋಮೇಶ್ವರ, ಕೋಟೆಕಾರ್, ಕುತ್ತಾರ್, ಕೊಣಾಜೆ ಮುಂತಾದ ಪ್ರದೇಶಗಳು ಮಂಗಳೂರು ನಗರಕ್ಕೆ ಅತ್ಯಂತ ಸಮೀಪದಲ್ಲಿದ್ದು, ಕೇವಲ ೧೦ ಕಿ.ಮೀ ಪರಿಮಿತಿಯಲ್ಲಿ ಈ ಎಲ್ಲಾ ಪ್ರದೇಶಗಳು ಇದ್ದು ನಗರ ಪಾಳಿಕೆಯಷ್ಟೇ ಜನಸಂಖ್ಯೆಯನ್ನು ಹೊಂದಿಕೊಂಡಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ೨೦೦೦ಕ್ಕಿಂತ ಹೆಚ್ಚು ರಿಕ್ಷಾಗಳು ಬಾಡಿಗೆ ಮಾಡುತ್ತಿದ್ದು, ಮೇಲಿನ ಎಲ್ಲಾ ಪ್ರದೇಶದ ಜನರ ಪ್ರಮುಖ ಖರೀದಿ, ವೈದ್ಯಕೀಯ ಸೇವೆ, ಶಾಲಾ ಕಾಲೇಜುಗಳಿಗೆ ಮಂಗಳೂರು ನಗರವನ್ನೇ ಅವಲಂಬಿಸಿಕೊಂಡಿರುವುದರಿಂದ ಅನೇಕ ಪ್ರಯಾಣಿಕರು ರಿಕ್ಷಾ ಮೂಲಕ ಮಂಗಳೂರು ನಗರಕ್ಕೆ ತುರ್ತು ಸೇವೆಗಾಗಿ ಬರುವವರಿಗೆ ನಗರ ಪ್ರದೇಶದಲ್ಲಿ ಬಿಟ್ಟು ಹೋಗಲು ಈ ಹಿಂದೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ನಗರದ ಸಭೆಯಲ್ಲಿ ಗ್ರಾಮಾಂತರ ಪ್ರದೇಶದ ರಿಕ್ಷಾಗಳು ನಗರ ಪ್ರದೇಶಕ್ಕೆ ಬಾಡಿಗೆ ತರಬಹುದು. ಆದರೆ ರಿಕ್ಷಾ ನಿಲ್ದಾಣದಲ್ಲಿ ನಿಂತು ಬಾಡಿಗೆ ಮಾಡುವಂತಿಲ್ಲ ಎಂಬ ಷರತ್ತಿನೊಂದಿಗೆ ಗ್ರಾಮಾಂತರ ಮತ್ತು ನಗರ ಎಂಬ ಎರಡು ವಲಯಗಳನ್ನಾಗಿ ಮಾಡಿ ಬಾಡಿಗೆ ಮಾಡುವ ಪ್ರದೇಶವನ್ನು ನಿಗದಿಪಡಿಸಿದೆ. ಆದರೆ ಈಗ ಏಕಾಏಕಿ ದಂಡ ವಿಧಿಸುತ್ತಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ರಹೀಂ ಕುತ್ತಾರ್, ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜಪ್ಪು, ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್, ತು.ರ.ವೇ ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆಯಾದ ವಿದ್ಯಾ.ಯು ಜೋಗಿ, ಯುವ ಘಟಕದ ಜಿಲ್ಲಾಧ್ಯಕ್ಷರಾದ ಹರೀಶ್ ಶೆಟ್ಟಿ, ಜಿಲ್ಲಾ ಮಹಿಳಾ ಸಂಚಾಲಕಿ ರೇಷ್ಮಾ ಉಳ್ಳಾಲ್, ಶಿವು ಶೆಟ್ಟಿ, ನಾಗೇಶ್ ಶೆಟ್ಟಿ, ಅಬ್ದುಲ್ ರಹಿಮಾನ್ ಉಳ್ಳಾಲ್, ಅಬುಸಾಲಿ ಉಳ್ಳಾಲ್, ಜಮಾಲ್ ಕುತ್ತಾರ್, ಗಂಗಾಧರ್ ಅತ್ತಾವರ್ ಹಾಗೂ ರಿಕ್ಷಾ ಚಾಲಕ ಮತ್ತು ಮಾಲಕ ಘಟಕದ ಪ್ರಮುಖರು ಉಪಸ್ಥಿತರಿದ್ದರು.