ಉಡುಪಿ,ಜೂ 15 (Daijiworld News/MSP): ಮಲ್ಪೆಯಲ್ಲಿ ಪತಿಯೊಂದಿಗೆ ವಾಸವಿದ್ದು, ಬಳಿಕ ಹುಟ್ಟೂರು ಕೊಪ್ಪಳಕ್ಕೆ ತೆರಳಿ ಅಲ್ಲಿ ಮೇ 24ರಂದು ಮೃತಪಟ್ಟ ಮಹಿಳೆಯ ಸಾವಿಗೆ ಪತಿ ಮತ್ತು ಆತನ ಸಂಬಂಧಿಕರು ಕಾರಣ ಎಂದು ಸಂಬಂಧಿಕರು ಮಲ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಪ್ಪಳ ಕನಕಗಿರಿ ಮಲ್ಲಿಗೆವಾಡ ಗ್ರಾಮದ ಚಿದಾನಂದ ಅವರ ತಂಗಿ ಹುಲಿಗೇಮ್ಮ(22) ಅವರನ್ನು 2 ವರ್ಷಗಳ ಹಿಂದೆ ಲಾಯದೂಣಿಸಿ ಗ್ರಾಮದ ಸೋಮಪ್ಪ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಸೋಮಪ್ಪ ಒಂದು ತಿಂಗಳ ಹಿಂದೆ ಪತ್ನಿಯನ್ನು ದುಡಿಯುವುದಕ್ಕಾಗಿ ಮಲ್ಪೆಗೆ ಕರೆದುಕೊಂಡು ಬಂದಿದ್ದ.
ಮೇ 17ರಂದು ತನ್ನ ಪರಿಚಯವರೊಂದಿಗೆ ಪತ್ನಿಯನ್ನು ಊರಿಗೆ ಕಳುಹಿಸಿಕೊಟ್ಟಿದ್ದ. ಅಲ್ಲಿಗೆ ತಲೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆಯ ವೈದ್ಯರು ತಲೆಯ ಒಳಗೆ ಪೆಟ್ಟಾಗಿರುವುದಾಗಿ ತಿಳಿಸಿದರು. ಬಳಿಕ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವಿಚಾರಿಸಿದಾಗ, 'ಮಲ್ಪೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಪತಿ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾರೆ' ಎಂದು ತಿಳಿಸಿದ್ದಾಳೆ. ಚಿಕಿತ್ಸೆಗೆ ಸ್ಪಂದಿಸದೆ ಎಂದು ಹುಲಿಗೇಮ್ಮ ಸಾವಿಗೀಡಾಗಿದ್ದಾಳೆ. ಆಕೆಯ ಸಾವಿಗೆ ಸೋಮಪ್ಪ, ಮಾವ ಬಸಪ್ಪ ಆದಪೂರ, ಮೈದುನ ಹುಲಿಗೇಶ ಮತ್ತು ಅತ್ತೆ ದುರುಗಮ್ಮ ಅವರು ಕಾರಣರಾಗಿದ್ದಾರೆ ಎಂದು ಚಿದಾನಂದ ಅವರು ಮಲ್ಪೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.