ಮಂಗಳೂರು ಡಿ 4: ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ, ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ಮತ್ತು ಜಿಲ್ಲೆಗೊಂದರಂತೆ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪಿಸಲು ಒತ್ತಾಯಿಸಿ, ಡಿ 4 ರಂದು ಸೋಮವಾರ ಪ್ರತಿಭಟನಾ ಧರಣಿ ನಡೆಸಿತು. ಇದೇ ವೆಳೆ ಮಾತನಾಡಿದ ಸಿಪಿಐ(ಎಂ) ಮುಖಂಡ ಸುನೀಲ್ಕುಮಾರ್ ಬಜಾಲ್, ಖಾಸಗಿ ಆಸ್ಪತ್ರೆಗಳನ್ನು ಮತ್ತು ಖಾಸಗಿ ವೈದ್ಯರ ಪ್ರಭಾವಕ್ಕೆ ಒಳಗಾಗಿ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಜನಪ್ರತಿನಿಧಿಗಳಿಂದಾಗಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮರೀಚಿಕೆ ಎಂದು ಕಳವಳ ವ್ಯಕ್ತಪಡಿಸಿದರು. ವೆನ್ಲಾಕ್ ಜಿಲ್ಲಾ ಆಸ್ಪತ್ರೆಯು ಖಾಸಗಿ ಆಸ್ಪತ್ರೆಗಳ ಮೆಡಿಕಲ್ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಲಿಕ್ಕಾಗಿ ಬಡವರ ದೇಹವನ್ನು ಪ್ರಯೋಗಕ್ಕಾಗಿ ಬಳಸುವ ಕೇಂದ್ರವಾಗಿದೆ. ಲೇಡಿಗೋಷನ್ ಆಸ್ಪತ್ರೆಯ ಕಾಮಗಾರಿ ಹತ್ತು ವರ್ಷ ಕಳೆದರೂ ಮುಗಿಯದೆ ಗರ್ಭಿಣಿ ಮಹಿಳೆಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆಗಳನ್ನು ನಿರ್ಮಾಣ ಮಾಡಬೇಕು, ಜಿಲ್ಲೆಗೆ ಕೂಡಲೇ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಿಸಬೇಕೆಂದು ಒತ್ತಾಯಿಸಿದರು.
ಬಳಿಕ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಖಾಸಗಿ ಮೆಡಿಕಲ್ ಕಾಲೇಜುಗಳ ಕೋಟ್ಯಾಂತರ ರೂಪಾಯಿ ಶುಲ್ಕ ಭರಿಸಲಾಗದೆ ಬಡವರ ಮಕ್ಕಳು ವೈದ್ಯರಾಗುವ ಕನಸು ನುಚ್ಚು ನೂರಾಗುತ್ತಿದೆ. ಕೋಟ್ಯಾಂತರ ರೂಪಾಯಿ ವ್ಯಯಿಸಿ ವೈದ್ಯರಾದವರು ರೋಗಿಗಳಿಂದ ವಿಪರೀತ ಶುಲ್ಕ ವಸೂಲಿ ಮಾಡಿ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜ್ ಕೂಡಲೇ ಆರಂಭಿಸಿ ಜನಸಾಮಾನ್ಯರ ಮಕ್ಕಳು ವೈದ್ಯರಾಗುವ ಕನಸು ಈಡೇರಬೇಕು ಎಂದರು. ನಗರದ ಖಾಸಗೀ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರಿ ಜನರಿಗೆ ಅನ್ಯಾಯವಾಗದಂತೆ ಜಿಲ್ಲಾ ಆರೋಗ್ಯ ಪ್ರಾಧಿಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ, ಎ.ಬಿ. ನೌಷಾದ್ ಬೆಂಗ್ರೆ, ನಗರ ಅಧ್ಯಕ್ಷ ನವೀನ್ ಕೊಂಚಾಡಿ, ಕಾರ್ಯದರ್ಶಿ ಸಾದಿಕ್ ಕಣ್ಣೂರು, ಧನರಾಜ್ ಉರ್ವಸ್ಟೋರ್, ಎಸ್ಎಫ್ಐ ನಗರ ಕಾರ್ಯದರ್ಶಿ ಮಾಧುರಿ ಬೋಳಾರ್, ನೌಷಾದ್ ಪಂಜಿಮೊಗರು ವಹಿಸಿದ್ದರು.