ಮಂಗಳೂರು, ಮಾ.17 (DaijiworldNews/AA): ಪ್ರತ್ಯೇಕ ಪ್ರಕರಣಗಳಲ್ಲಿ ಮಂಗಳೂರಿನ ಓರ್ವ ಬಾಲಕ ಹಾಗೂ ಮತ್ತೋರ್ವ ಬಾಲಕಿಯ ನಾಪತ್ತೆಗೆ ಪರೀಕ್ಷೆಯ ಭಯವೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ.

ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ 17 ವರ್ಷದ ಬಾಲಕನೋರ್ವ ಮಾ.12ರಂದು ಕಾಣೆಯಾಗಿ, ಮಾ.15ರಂದು ಪತ್ತೆಯಾಗಿದ್ದ. ಆತ ಗೋವಾ, ಹುಬ್ಬಳ್ಳಿ ಮುಂತಾದ ಕಡೆ ಸುತ್ತಾಡಿದ್ದ. ಪರೀಕ್ಷೆಯ ಭಯದಿಂದ ಆತ ಮನೆ ಬಿಟ್ಟು ಹೋಗಿರುವುದಾಗಿ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಮತ್ತೊಂದು ಪ್ರಕರಣದಲ್ಲಿ ಪಣಂಬೂರು ಠಾಣೆ ವ್ಯಾಪ್ತಿಯ ಬಾಲಕಿಯೋರ್ವಳು ಕಾಣೆಯಾಗಿ ಬಳಿಕ ಪತ್ತೆಯಾಗಿದ್ದಳು. ಆಕೆ ಕೂಡ ಪರೀಕ್ಷೆಯ ಭಯದಿಂದ ಮನೆ ಬಿಟ್ಟು ಹೋಗಿರುವುದಾಗಿ ಗೊತ್ತಾಗಿದೆ ಎಂದಿದ್ದಾರೆ.
ಕರಾವಳಿಯಲ್ಲಿ ಸಂಚಲನ ಮೂಡಿಸಿದ್ದ ಬಂಟ್ವಾಳದ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗಂತ್ ಕೂಡ ಮನೆ ಬಿಟ್ಟು ಹೋಗಿದ್ದು ಪರೀಕ್ಷೆಯ ಭಯದಿಂದಲೇ ಎಂಬುದು ಆತ ಪತ್ತೆಯಾದ ಬಳಿಕ ತಿಳಿದುಬಂದಿತ್ತು.
ಪರೀಕ್ಷೆ ಬಗ್ಗೆ ಯಾವುದೇ ವಿದ್ಯಾರ್ಥಿಯೂ ಆತಂಕಪಡುವ ಅಗತ್ಯವಿಲ್ಲ. 1ರಿಂದ 9ನೇ ತರಗತಿಯವರೆಗೆ ಸಿಸಿಇ ಪದ್ಧತಿ ಇರುವುದರಿಂದ ಯಾವ ವಿದ್ಯಾರ್ಥಿಯೂ ಅನುತ್ತೀರ್ಣ ಆಗುವ ಸಾಧ್ಯತೆ ಇಲ್ಲ. ಒಂದು ವೇಳೆ ಅನುತ್ತೀರ್ಣವಾದರೆ ಅಥವಾ ಕಡಿಮೆ ಅಂಕ ಬಂದರೆ ಮರು ಪರೀಕ್ಷೆ ಬರೆಯಬಹುದು. ಹೆತ್ತವರು ಕೂಡ ಮಕ್ಕಳ ಮೇಲೆ ಅತಿಯಾದ ಒತ್ತಡ ಹಾಕುವುದು ಸರಿಯಲ್ಲ. 1ರಿಂದ 9ನೇ ತರಗತಿ ಮಾತ್ರವಲ್ಲದೆ, ಯಾವುದೇ ತರಗತಿಯ ವಿದ್ಯಾರ್ಥಿಗಳೂ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಬೇಕು. ಆತಂಕ ಬೇಡ. ಅನುತ್ತೀರ್ಣವಾದರೆ ಹಾಗೂ ಕಡಿಮೆ ಅಂಕ ಬಂದರೆ ಭವಿಷ್ಯ ಮುಗಿಯುವುದಿಲ್ಲ. ಅವಕಾಶಗಳು ಅಪಾರವಾಗಿವೆ ಎಂದು ದ.ಕ. ಜಿಲ್ಲಾ ಡಿಡಿಪಿಐ ಗೋವಿಂದ್ ಮಡಿವಾಳ ತಿಳಿಸಿದ್ದಾರೆ.