ವರದಿ - ಅನೂಷ್ ಪಂಡಿತ್
ಮಂಗಳೂರು, ಜೂ15(Daijiworld News/SS): ನಗರ ಶರವೇಗದಲ್ಲಿ ಬೆಳೆಯುತ್ತಿದೆ. ಜೊತೆಗೆ ಅಷ್ಟೇ ಸಮಸ್ಯೆಗಳೂ ಕೂಡ ಇಲ್ಲಿವೆ. ಆದರೆ ಇದನ್ನು ಬಗೆಹರಿಸಬೇಕಾದ ಜನಪ್ರತಿನಿಧಿಗಳು ಮಾತ್ರ ಮೂಕಪ್ರೇಕ್ಷಕನಂತೆ ನೋಡುತ್ತಾ, ತಮಗೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲವೆಂಬಂತೆ ಇರುವುದು ಮಂಗಳೂರಿಗರ ದುರಂತ.
ನಗರದ ಪ್ರಮುಖ ಸಮಸ್ಯೆ ನೋ ಪಾರ್ಕಿಂಗ್. ಹಲವು ಬಾರಿ ಸಂಚಾರಿ ಪೊಲೀಸರೇ ಹೊಸ ಹೊಸ ಕಾನೂನುಗಳನ್ನು ಜಾರಿಗೆ ತಂದು ಟ್ರಾಫಿಕ್ ಸುಧಾರಣೆಗೆ ಯತ್ನಿಸಿದರೂ ಪ್ರಯೋಜನ ಶೂನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಚಾರಿ ಪೊಲೀಸರು ನೋ ಪಾರ್ಕಿಂಗ್ ಎಂಬ ನೆಪವೊಡ್ಡಿ, ಪಾರ್ಕಿಂಗ್ ಮಾಡಿದ ದ್ವಿಚಕ್ರ ಹಾಗೂ ನಾಲ್ಕು ಚಕ್ರವಾಹನಗಳನ್ನು ಟೋಯಿಂಗ್ ಗಾಡಿಯ ಮೂಲಕ ಐದಾರು ಮಂದಿ ಯುವಕರನ್ನು ಗುತ್ತಿಗೆ ಪಡೆದು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಎತ್ತಂಗಡಿ ಮಾಡುತ್ತಾರೆ. ಇದು ಸರಿಯೇ ಅನ್ನೋದು ಪ್ರಶ್ನೆ.
ವಾಹನದ ಬಳಿಗೆ ಬಂದಾಗ ಮಾಲಕ ತನ್ನ ವಾಹನ ಕಾಣದೇ ಕಂಗಾಲಾಗುತ್ತಾನೆ. ಬಳಿಕ ನಗರದ ಎಲ್ಲ ಠಾಣೆಗಳಿಗೆ ಅಲೆದಾಡಬೇಕಾಗುತ್ತದೆ. ಇದು ಸರಿಯೋ.. ತಪ್ಪೋ ಎನ್ನುವುದೇ ಇಲ್ಲಿನ ಪ್ರಶ್ನೆ. ಪರ ವಿರೋಧದ ಚರ್ಚೆಯ ನಡುವೆಯೇ ಇಂದು ಪೊಲೀಸರು ವಾಹನಗಳನ್ನು ಟೋಯಿಂಗ್ ಮಾಡುತ್ತಾರೆ. ದ್ವಿಚಕ್ರ ವಾಹನಕ್ಕೆ 750 ರೂಪಾಯಿ ಮತ್ತು ಕಾರು ಮಾಲಕರಿಗೆ ದಂಡ 1500 ರೂಪಾಯಿ ಪಾವತಿಸಬೇಕು. ಇನ್ನು ಬಡಪಾಯಿ ಬೈಕ್ ಸವಾರರ ಬಳಿ ಇಷ್ಟೊಂದು ದುಡ್ಡು ಇರುವುದೇ ಇಲ್ಲ.
ಇದು ಯಾರ ತಪ್ಪು...? ಪಾರ್ಕಿಂಗ್ ಮಾಡುವವರದ್ದೋ ಅಥವಾ ಪಾರ್ಕಿಂಗ್ ಇಲ್ಲದೆ ಕಟ್ಟಡ ನಿರ್ಮಿಸಿದವರದ್ದೋ...? ಅದೆಷ್ಟೋ ಕಟ್ಟಡಗಳಿಗೆ ಸೆಟ್ಬ್ಯಾಕ್ ಬಿಡಬೇಕಾಗಿದೆ. ವಸತಿ ಸಮುಚ್ಛಯ, ಮಾಲ್ಗಳ ಕೆಳಭಾಗದಲ್ಲಿ ಪಾರ್ಕಿಂಗ್ಗೆ ಜಾಗ ಮೀಸಲಿಡಬೇಕು. ಆದರೆ ಕಟ್ಟಡ ಮಾಲಕರು ನೆಲ ಅಂತಸ್ತನ್ನೂ ಬಾಡಿಗೆಗೆ ನೀಡಿ ಅಲ್ಲೂ ದುಡ್ಡು ಮಾಡುತ್ತಿದ್ದಾರೆ. ಪಾರ್ಕಿಂಗ್ ಜಾಗದಲ್ಲೂ ಅಂಗಡಿಗೆ ಅವಕಾಶವನ್ನು ಪಾಲಿಕೆ ಅಧಿಕಾರಿಗಳೇ ಮಾಡಿಕೊಟ್ಟಿದ್ದಾರೆ.
ಪಾರ್ಕಿಂಗ್ಗೆ ಜಾಗ ಮೀಸಲಿಡದೇ, ಸೆಟ್ಬ್ಯಾಕ್ ಬಿಡದೇ ಇರುವ ಕಟ್ಟಡಕ್ಕೆ ಪರವಾನಿಗೆ ನೀಡಿದ ಅಧಿಕಾರಿಗಳಿಗೇಕೆ ಯಾವುದೇ ಕಾನೂನು ಅನ್ವಯಿಸುವುದಿಲ್ಲ ಅನ್ನೋದೇ ಸದ್ಯದ ಪ್ರಶ್ನೆ. ಈ ಬಗ್ಗೆ ಜನಪ್ರತಿನಿಧಿಗಳೂ ಕುರುಡರಾಗಿದ್ದಾರೆ. ಹಿಂದೆ ಜನ ಸಂಖ್ಯೆ, ವಾಹನಗಳು ಕಡಿಮೆ ಇದ್ದ ಸಂದರ್ಭದಲ್ಲಿ ತೊಂದರೆ ಇರಲಿಲ್ಲ. ಆದರೆ ದಿನಕಳೆದಂತೆ ನಗರದಲ್ಲಿ ವಾಹನಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ದಿನನಿತ್ಯ ಪಾರ್ಕಿಂಗ್ಗೆ ಜಾಗ ಇಲ್ಲದೆ ಎಲ್ಲೋ ಒಂದು ಕಡೆ ನಿಲ್ಲಿಸಿ ದಂಡ ಕಟ್ಟುವ ಕರ್ಮ ವಾಹನ ಚಾಲಕನಿಗೆ. ಇಂತಹ ವ್ಯವಸ್ಥೆ ಸುಧಾರಣೆ ಆಗಬೇಕಾಗಿದೆ.
ಕೆಲವು ದಿನದ ಹಿಂದೆ ನಾನು ಕೇವಲ ಐದು - ಹತ್ತು ನಿಮಿಷಗಳ ಕಾರ್ಯಕ್ಕಾಗಿ ರಸ್ತೆ ಪಕ್ಕದಲ್ಲೇ ವಾಹನ ನಿಲ್ಲಿಸಿ ಹೋದೆ. ಮರಳಿ ಬರುವಷ್ಟರಲ್ಲಿ ನನ್ನ ವಾಹನ ನಾಪತ್ತೆಯಾಗಿದೆ. ಕಳ್ಳರು ತೆಗೆದುಕೊಂಡು ಹೋಗಿದ್ದಾರೆಯೇ ಎಂದು ಅಲೋಚಿಸುವಷ್ಟರಲ್ಲಿ ಅಲ್ಲಿದ್ದ ವ್ಯಕ್ತಿಯೊಬ್ಬರು ವಾಹನ ಟೋಯಿಂಗ್ನವರು ಕೊಂಡು ಹೋದರೆಂದು ಹೇಳಿದರು. ನನಗೆ ಯಾವ ಪೊಲೀಸ್ ಠಾಣೆಗೆ ಹೋಗಬೇಕು ಎಂದು ಗೊತ್ತಾಗದೇ ಎರಡು ಮೂರು ಸ್ಟೇಶನ್ಗಳಿಗೆ ಆಟೋದಲ್ಲಿ ಅಲೆದಾಡಿದೆ. ಕೊನೆಗೆ ಪಂಪ್ವೆಲ್ ಸಂಚಾರಿ ಕಟ್ಟಡದಲ್ಲಿ ನನ್ನ ವಾಹನ ಸಿಕ್ಕಿತು. ಆದರೆ ನನಗೆ ನೋ ಪಾರ್ಕಿಂಗ್ ಅಥವಾ ಸಿಂಗಲ್ ಲೇಯರ್ನಲ್ಲಿ ಪಾರ್ಕಿಂಗ್ ಮಾಡಬೇಕು ಅಂತ ತಿಳಿದಿರಲಿಲ್ಲ. ನಾನು ನಿಲ್ಲಿಸಿದ ಜಾಗದಲ್ಲಿ ನಾಮಫಲಕವೂ ಇರಲಿಲ್ಲ. ಪೊಲೀಸರು ಅಲ್ಲೇ ದಂಡ ವಿಧಿಸಿದ್ದರೆ ನಾನು ಇಷ್ಟೊಂದು ಅಲೆದಾಡುವ ಸ್ಥಿತಿ ನಿರ್ಮಾಣವಾಗುವ ಅಗತ್ಯವೇ ಇರಲಿಲ್ಲ ಎನ್ನುತ್ತಾರೆ ನಗರದ ಗೃಹಿಣಿ ಶಾಲಿನಿ. ಕನಿಷ್ಠ ಸಾರ್ವಜನಿಕರಿಗೆ ಮಾಹಿತಿ ನೀಡಲಿ ಅನ್ನೋದೇ ಇವರ ಆಶಯ.
ಈ ಹಿಂದೆ ಪೊಲೀಸರು ಲಾಕ್ ಹಾಕಿ ದೂರವಾಣಿ ಸಂಖ್ಯೆ ಇಡುತ್ತಿದ್ದರು. ವಾಹನ ಸಂಬಂಧಿತರು ಆ ದೂರವಾಣಿ ಕರೆಗೆ ಫೋನ್ ಮಾಡಿ ಮಾಹಿತಿ ಪಡೆದು ದಂಡ ಕಟ್ಟುತ್ತಿದ್ದರು. ಪ್ರಸ್ತುತ ತಮ್ಮ ವಾಹನಗಳನ್ನು ಪೊಲೀಸರು ಎಲ್ಲಿಗೆ ಕೊಂಡು ಹೋಗುತ್ತಿದ್ದಾರೆ ಅನ್ನೋ ಮಾಹಿತಿಯೇ ಇಲ್ಲ ಎನ್ನುತ್ತಾರೆ ನೊಂದ ವಾಹನ ಚಾಲಕ ಮಹೇಶ್.
ನಗರದ ಕಂಕನಾಡಿ ಪರಿಸರದಲ್ಲಿ ಅಪಘಾತವಾಗಿ ಬಿದ್ದವರನ್ನು ವೈದ್ಯರು ತನ್ನ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಗಾಯಾಳುವನ್ನು ಆಸ್ಪತೆಗೆ ದಾಖಲಿಸಿ ಬರುವಷ್ಟರಲ್ಲಿ ಅವರ ಕಾರೇ ಟೋಯಿಂಗ್ ಆಗಿದ್ದು ವಿಪರ್ಯಾಸ. ಹೀಗಿರುವಾಗ ರಸ್ತೆ ಬದಿ ಅಪಘಾತವಾದಾಗ ಸಹಾಯ ಹಸ್ತ ಚಾಚಬೇಕಾ ಎನ್ನುವ ಪ್ರಶ್ನೆ ಜಿಜ್ಞಾಸೆಯಾಗಿ ಕಾಡಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಮಾಡುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಆದರೆ ವ್ಯವಸ್ಥೆಯ ಲೋಪದಿಂದಾಗಿ ಅಲೆದಾಡುವ ಪ್ರಮೇಯ ಮಾತ್ರ ಬಡ ಚಾಲಕರಿಗೆ ಬಾರದಿರಲಿ ಅನ್ನೋದೇ ಕಳಕಳಿ.