ಉಡುಪಿ, ಮಾ.20(DaijiworldNews/TA): ಕರಾವಳಿ ಭಾಗದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದರಿಂದ ಅಂತರ್ಜಲ ವೃದ್ಧಿಗಾಗಿ ಹಾಗೂ ಕೃಷಿ ಚಟುವಟಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಶ್ಚಿಮ ವಾಹಿನಿ ಯೋಜನೆಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲು ಅನುದಾನ ಮಂಜೂರು ಮಾಡಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸದನದಲ್ಲಿ ಧ್ವನಿ ಎತ್ತಿದರು.

ಕೆ.ಐ..ಡಿ.ಬಿ ಸಂಸ್ಥೆಯ ಅಡಿ 576 ಎಕರೆ ಭೂ ಸ್ವಾಧೀನ ಮಾಡಿದ್ದು ಇಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಬೇಕು ಹಾಗೂ ಉದ್ಯೋಗ ಸೃಷ್ಟಿಯಾಗಬೇಕು. ಭೂಮಿ ಕಳೆದುಕೊಂಡ ಸ್ಥಳೀಯರಿಗೆ ಭೂ ಸ್ವಾಧೀನ ಪರಿಹಾರ ನೀಡಬೇಕು. ಆದ್ಯತೆಯ ಮೇಲೆ ಉದ್ಯೋಗ ನೀಡಬೇಕು.
ಬಿಲ್ಲವ, ಈಡಿಗ ಸೇರಿದಂತೆ 26 ಸಮುದಾಯದವರೆಗೆ "ನಾರಾಯಣ ಗುರು ಅಭಿವೃದ್ಧಿ ಮಂಡಳಿ" ರಚಿಸಲಾಗಿದ್ದು ಈ ಅಭಿವೃದ್ಧಿ ಮಂಡಳಿಗೆ ಕಡಿಮೆ ಅನುದಾನ ನೀಡಿದ್ದು ಇದು ಆ ಸಮುದಾಯಕ್ಕೆ ಮಾಡಿದ ಅವಮಾನ ಈ ಬಗ್ಗೆ ಗಮನ ಹರಿಸಬೇಕು. ತುಳು ಭಾಷೆಯನ್ನು 8ನೇ ಪರಿಚ್ಛೇದದಲ್ಲಿ ಸೇರಿಸಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಬೇಕು ಎಂದು ತಿಳಿಸಿದರು.