ಮಂಗಳೂರು,ಮಾ.20(DaijiworldNews/AK): ರಾಜ್ಯಾದ್ಯಂತ ನಾಳೆಯಿಂದ ಮಾ.21ರಿಂದ ಏಪ್ರಿಲ್ 4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-1 ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವ ಸಿದ್ಧತೆ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 92 ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 29,760 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಸುಸೂತ್ರವಾಗಿ ನಡೆಸಲು ಒಟ್ಟು 2057 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ 184 ಪೊಲೀಸ್ ಸಿಬಂದಿ ಹಾಗೂ ಪರೀಕ್ಷಾ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಸಾಗಾಟಕ್ಕೆ 34 ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ. ಪ್ರಶ್ನೆ ಪತ್ರಿಕೆಯನ್ನು ಸರಿಯಾಗಿ ಓದಿ, ಅರ್ಥೈಸಿಕೊಂಡು ಧೈರ್ಯ ದಿಂದ ಪರೀಕ್ಷೆಯನ್ನು ಎದುರಿಸಿ ಎಂದು ಕೆನರಾ ಪ್ರೌಢ ಶಾಲೆ ಡೊಂಗರಕೇರಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕಿ ಅರುಣಾ ಕುಮಾರಿ ಹೇಳಿದ್ದಾರೆ.

ಪರೀಕ್ಷೆ ಅವ್ಯವಹಾರ ತಡೆಗಟ್ಟಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶನದಂತೆ ಜಿಲ್ಲೆಯ 51 ಪರೀಕ್ಷೆ ಕೇಂದ್ರದ 590 ಕೊಠಡಿಗಳಲ್ಲಿಯೂ ಸಿಸಿ ಕೆಮರಾ ಅಳಡಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲ ಕೊಠಡಿಗಳ ವೆಬ್ ಕಾಸ್ಟಿಂಗ್ವೀಕ್ಷಣೆಯ ಹೊಣೆಯನ್ನು 12 ಅಧಿಕಾರಿ,ಸಿಬಂದಿಗೆ ವಹಿಸಲಾಗಿದೆ.
ಜಿಲ್ಲಾಮಟ್ಟದ 3 ತಂಡ ಹಾಗೂ ವಲಯ ಮಟ್ಟದ ವಿಚಕ್ಷಣ ದಳವನ್ನು ಪ್ರತಿ ತಾಲೂಕಿನಗೆ ಒಂದರಂತೆ ರಚಿಸಲಾಗಿದೆ. ಈ ಬಾರಿ ಪರೀಕ್ಷೆ ಬರೆಯುವ ಬಾಲಕರಿಗೂ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ದಿನದಂದು ಬಸ್ನಲ್ಲಿ ಹಾಲ್ ಟಿಕೆಟ್ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು. ಪರೀಕ್ಷಾ ಕೇಂದ್ರದ ಎದುರು ಬಸ್ಸು ನಿಲ್ಲಿಸಲೂ ಸೂಚಿಸಲಾಗಿದೆ ಎಂದು ಹೇಳಿದರು.