ಮಂಗಳೂರು, ಮಾ.21(DaijiworldNews/TA): ಸಾವಿರಾರು ಜನರನ್ನು ಒಗ್ಗೂಡಿಸಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಡೆಸುವ ಎಕ್ಸಿಬೀಷನ್ ಗೆ ಸ್ಥಳೀಯರ ವಿರೋಧವಿದ್ದರೂ, ಅವರ ಲಿಖಿತ ದೂರುಗಳನ್ನು ಕಡೆಗಣಿಸಿರುವ ಜಿಲ್ಲಾಡಳಿತ, ಸ್ಥಳೀಯಾಡಳಿತದ ಬೇಜವಾಬ್ದಾರಿತನಕ್ಕೆ ಅಲ್ಲಿನ ನಿವಾಸಿಗಳು ಬೀದಿ ಹೋರಾಟಕ್ಕೆ ಮುಂದಾಗಿದ್ದಾರೆ.


ಈಗಾಗಲೇ 15 ಮನೆಗಳಲ್ಲಿ ಮೂವರು ಹೃದಯ ಸಂಬಂಧಿ ಚಿಕಿತ್ಸೆಗೊಳಗಾದವರು, ಮೂವರು ಮಕ್ಕಳು ಅಸ್ತಮಾದಿಂದ ಬಳಲುತ್ತಿರುವವರು ಇದ್ದರೂ ಎಕ್ಸಿಭೀಷನ್ ಆಯೋಜಕರು ಮನೆಮುಂದೆ ಶಬ್ದ ಮಾಲಿನ್ಯ, ಮಲ ವಿಸರ್ಜನೆ, ಸ್ವಚ್ಛತೆ ಕಾಪಾಡದೇ ಮಾಲಿನ್ಯ ನಡೆಸಿ ಪರಿಸರವನ್ನೇ ಹಾಳುಗೆಡವಲು ಆರಂಭಿಸಿದ್ದಾರೆ. ರಾ.ಹೆ.66 ರ ಸಮೀಪವೇ ಖಾಸಗಿ ಸ್ಥಳವೊಂದಿದೆ, ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಸತತ ಐದನೇ ವರ್ಷಕ್ಕೆ ಎಕ್ಸಿಬೀಷನ್ ತೊಕ್ಕೊಟ್ಟು ಕಲ್ಲಾಪುವಿನಲ್ಲಿ ಎಪ್ರಿಲ್ ಮತ್ತು ಮೇ ಎರಡು ತಿಂಗಳುಗಳ ಕಾಲ ನಡೆಯುತ್ತಿದೆ.
ಮಂಗಳೂರು ತಾಲೂಕು ಸೇರಿದಂತೆ ಉಳ್ಳಾಲ ತಾಲೂಕು ಹಾಗೂ ಕೇರಳ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಇಲ್ಲಿ ಭಾಗವಹಿಸುತ್ತಾರೆ. ಆದರೆ ಉಳ್ಳಾಲ ನಗರಸಭೆಯ ವಾರ್ಡ್ ಸಂಖ್ಯೆ-16 ಕೆರೆಬೈಲ್ ಭಾಗಕ್ಕೆ ಖಾಲಿ ಜಾಗ ತಾಗಿಕೊಂಡೇ ಇದೆ. ಮೊದಲೇ ಈ ಭಾಗಕ್ಕೆ ಮೂಲಭೂತ ಸೌಕರ್ಯಗಳೇ ಇಲ್ಲ. ರಾ.ಹೆ.66 ನ್ನು ಸಂಪರ್ಕಿಸುವ ರಸ್ತೆ ಕಾರ್ಯಕ್ರಮಗಳು ಜರಗುವ ಖಾಲಿ ಜಾಗದಲ್ಲಿದೆ. ಅಲ್ಲಿಗೇ ತಡೆಬೇಲಿ ಹಾಕಿರುವುದರಿಂದ ದೂರದ ಚೆಂಬುಗುಡ್ಡೆಯಾಗಿ ಸುತ್ತುಬಳಸಿ ಹೆದ್ದಾರಿಯನ್ನು ಸಂಪರ್ಕಿಸಬೇಕಿದೆ. ರಸ್ತೆಯಿಲ್ಲದೆ ಈ ಭಾಗಕ್ಕೆ ಘನತ್ಯಾಜ್ಯ ವಿಲೇವಾರಿ ವಾಹನಗಳು ಬರಲು ಒಪ್ಪುತ್ತಿಲ್ಲ, ಗ್ಯಾಸ್ ಸಾಗಾಟದ ವಾಹನಗಳು ಬರುವುದಿಲ್ಲ, ನಗರಸಭೆಯಿಂದ ಬರುವ ಕುಡಿಯುವ ನೀರಿನ ಸಂಪರ್ಕವೇ ಇಲ್ಲ. ಸ್ಥಳೀಯ ನಗರಸಭೆ ಸದಸ್ಯರು, ನಗರಸಭೆ ಮುಖ್ಯಾಧಿಕಾರಿಗಳಿಗೆ ಸಮಸ್ಯೆಗಳ ಕುರಿತು ದೂರು ನೀಡುತ್ತಲೇ ಬಂದಿದ್ದರೂ ಸ್ಪಂಧನೆ ಸಿಕ್ಕಿಲ್ಲ .
2025ರ ಫೆ.14 ರಂದು ಉಳ್ಳಾಲ ನಗರಸಭೆಗೆ ಮನೆ ಸುತ್ತಲ ಮಲಿನ, ಮನೆಗಳಲ್ಲಿ ಅಸೌಖ್ಯದಿಂದ ಇರುವ ಸಂದರ್ಭ ಅನುಮತಿ ನೀಡಬಾರದು ಎಂದು ದೂರರ್ಜಿಯನ್ನು ಸಲ್ಲಿಸಲಾಗಿತ್ತು, ಉಳ್ಳಾಲ ಪೊಲೀಸ್ ಠಾಣೆಗೂ ಮನವಿಯನ್ನು ಸಲ್ಲಿಸಲಾಯಿತು. ಸ್ಪಂಧನೆ ಸಿಗದೇ ಇದ್ದಾಗ ಮಾ. 12 ಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಉಳ್ಳಾಲ ನಗರಸಭೆ ಮುಖ್ಯಾಧಿಖಾರಿಗಳಿಗೆ ಮನವಿ ಸಲ್ಲಿಸಲಾಯಿತು. ಆದರೆ ಪ್ರತಿವರ್ಷ ನಿರಾಕ್ಷೇಪಣಾ ಪ್ರತಿಗೆ ಸಹಿ ದಾಖಲಿಸಲು ಬರುವ ಪೊಲೀಸರು ಈ ಬಾರಿ ಬಾರದೇ ಇದ್ದರೂ, ಎಕ್ಸಿಭೀಷನ್ ತಯಾರಿ ಆರಂಭವಾಗಿದೆ. ದಿನಾ ಬೆಳಿಗ್ಗೆ ಪರಿಸರವಿಡೀ ಮಲವಿಸರ್ಜಿಸಿ ಮಲಿನಗೊಳಿಸುತ್ತಿದ್ದಾರೆ. ಶುಚಿತ್ವವನ್ನು ಕಾಪಾಡುತ್ತಲೇ ಇಲ್ಲ. ಮೂಲಭೂತ ಸೌಕರ್ಯಗಳಿಲ್ಲದೇ ಎಕ್ಸಿಭೀಷನ್ ತಯಾರಿ ಆರಂಭವಾಗಿದೆ. ಸಾವಿರಾರು ಮಂದಿ ಸೇರುವ ಪ್ರದರ್ಶನಕ್ಕೆ ಫೈರ್ ಸರ್ವಿಸ್ ಇಲಾಖೆ ಅನುಮತಿ ನೀಡಿರುವುದೇ ಗಮನಾರ್ಹ. ತಿರುಗಾಡಲು ಜಾಗವಿಲ್ಲದಂತಹ ಸ್ಥಿತಿಯಿದ್ದರೂ, ಪ್ರದರ್ಶನ ಮಾತ್ರ ಅಧಿಕಾರಿಗಳ ಕುರುಡು ನೀತಿಯಿಂದ ನಡೆಯುತ್ತಿದೆ. ಕಳೆದ ವರ್ಷದಲ್ಲಿ ಬೆಂಕಿ ಅನಾಹುತ ಸಂಭವಿಸಿದಾಗ ಸ್ಥಳೀಯರೇ ಸೇರಿಕೊಂಡು ನೀರು ಎರಚಿ ಬೆಂಕಿ ನಂದಿಸಿದ್ದರು. ಸಕಾಲದಲ್ಲಿ ಬೆಂಕಿ ನಂದಿ ಹೋಗಿದ್ದರಿಂದಾಗಿ ಸಂಭಾವ್ಯ ಅನಾಹುತ ತಪ್ಪಿತ್ತು. ಇಲ್ಲದೇ ಹೋದಲ್ಲಿ ಮನೆಗಳೆಲ್ಲವೂ ಸುತ್ತು ಬೂದಿಯಾಗುತ್ತಿತ್ತು. ರಾಜಕಾಲುವೆ ಮುಚ್ಚುತ್ತಿರುವ ಯುನಿಟಿ ಸಭಾಂಗಣ ಮಾಲೀಕರು ಕಲ್ಲಾಪುವಿನಲ್ಲಿ ಕಾರ್ಯಚರಿಸುತ್ತಿರುವ ಯುನಿಟಿ ಮದುವೆ ಸಭಾಂಗಣದವರು ಅಡುಗೆ ಕೋಣೆಯ ವಿಸ್ತರಣೆ ಆರಂಭಿಸಿದ್ದಾರೆ.
ಆದರೆ ಚೆಂಬುಗುಡ್ಡೆಯಿಂದ ಕಲ್ಲಾಪು ಭಾಗಕ್ಕೆ ಮಳೆನೀರು ಹರಿದು ಹೋಗುವ ರಾಜಕಾಲುವೆಯನ್ನೇ ಮುಚ್ಚಲಾಗುತ್ತಿದೆ. ಎಲ್ಲಾ ಕಡೆಗಳೆಲ್ಲಿ ವಿಸ್ತರಣೆ ಹೆಚ್ಚಿರುವ ಚರಂಡಿ ಸಭಾಂಗಣದ ಹಿಂಭಾಗದಲ್ಲಿ ಕಿರಿದಾಗಿದೆ. ಇದರಿಂದ ಮಳೆಗಾಲದಲ್ಲಿ ಈ ಭಾಗ ಮುಳುಗುವುದರಲ್ಲಿ ಸಂಶಯವಿಲ್ಲ. ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ ಫಲವಾಗಿ ಅಧಿಕಾರಿಗಳು ಸ್ಥಳಕ್ಕಾಗಮಿಸಿದರೂ ನೋಟೀಸು ನೀಡುತ್ತೇವೆ ಎನ್ನುವ ಭರವಸೆಯನ್ನು ನೀಡಿದ್ದಾರೆ. ಆದರೂ ಕಾಮಗಾರಿ ಪ್ರಗತಿಯಲ್ಲಿದೆ. ರಾಜಕಾಲುವೆಯನ್ನು ಮುಚ್ಚುವ ಪ್ರಯತ್ನದಲ್ಲಿ ಯುನಿಟಿ ಸಭಾಂಗಣ ಮಾಲೀಕರಿದ್ದಾರೆ ಅನ್ನುವ ಆರೋಪವನ್ನು ಸ್ಥಳೀಯರು ಮಾಡಿದ್ದಾರೆ.
ಎಕ್ಸಿಭೀಷನ್ ಮತ್ತು ರಾಜಕಾಲುವೆ ಮುಚ್ಚುವ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾಧಿಖಾರಿಗಳು, ಮುಖ್ಯಾಧಿಕಾರಿಗಳು , ಜನಪ್ರತಿನಿಧೀಗಳು ಸ್ಪಂಧಿಸದೇ ಇದ್ದಲ್ಲಿ, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದು ಉಳ್ಳಾಲ ನಗರಸಭೆ ಎದುರುಗಡೆ ಪ್ರತಿಭಟನೆ ನಡೆಸುವುದು ಖಚಿತ ಎಂದು ಸ್ಥಳೀಯರು ತಿಳಿಸಿದ್ದಾರೆ.