ಮಂಗಳೂರು, ಮಾ.22 (DaijiworldNews/AA): ಸರ್ವರಿಗೂ ಸಮಪಾಲು, ಸಮಬಾಳು ಎಂಬ ಸಂವಿಧಾನದ ಆಶಯದಂತೆ ಮಂಡಿಸಿರುವ ರಾಜ್ಯ ಸರ್ಕಾರದ ಬಜೆಟನ್ನು ಹಲಾಲ್ ಬಜೆಟ್ ಎಂದು ಟೀಕಿಸುವ ಮೂಲಕ ಬಿಜೆಪಿ ದ್ವೇಷ ಸಾಧನೆಯ ರಾಜಕೀಯ ಮಾಡುತ್ತಿದೆ. ಸಿಎಂ ಮಂಡಿಸಿರುವ 4 ಲಕ್ಷ ಕೋಟಿ ರೂಪಾಯಿ ಬಜೆಟ್ ಒಂದು ಐತಿಹಾಸಿಕ ಸಾಧನೆಯಾಗಿದ್ದು, ಅಭಿವೃದ್ಧಿ ಮತ್ತು ಆರ್ಥಿಕ ಶಕ್ತಿಯನ್ನು ಒತ್ತಿಹೇಳುತ್ತದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.


ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ನಾಯಕರು ಸಬ್ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ. ಅದಕ್ಕೆ ಪೂರಕವಾಗಿ ರಾಜ್ಯದಲ್ಲಿ ಬಜೆಟ್ನ ಶೇ. 1ರಷ್ಟು ಪಾಲನ್ನು ಶೇ. 20ರಷ್ಟಿರುವ ರಾಜ್ಯ ಜನಸಂಖ್ಯೆಯ ಎಲ್ಲಾ ವರ್ಗದ ಅಲ್ಪಸಂಖ್ಯಾತರಿಗೆ ನೀಡಿದರೆ ಅದನ್ನು ಹಲಾಲ್ ಎಂದು ಹೇಳುವ ಮೂಲಕ ತಮ್ಮದೇ ನಾಯಕರ ಮಾತುಗಳಿಗೆ ವಿರುದ್ಧವಾಗಿ ವಿಭಜನಾಕಾರಿ ಮಾತುಗಳನ್ನಾಡುತ್ತಾರೆ ಎಂದು ಹೇಳಿದರು.
ಬಿಜೆಪಿಯ ಸಬ್ ಕಾ ಸಾತ್ ಸಬ್ ಕಾ ವಿಕಾಸ್, ಸಬ್ಕಾ ವಿಶ್ವಾಸ್ ಎನ್ನುವುದು ಮಣಿಪುರ, ದೆಹಲಿ, ಉತ್ತರ ಪ್ರದೇಶ, ಬಿಹಾರ ಎಲ್ಲಿಯೂ ಪಾಲನೆಯಾಗುತ್ತಿಲ್ಲ. ಕರ್ನಾಟಕದ ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿ ನಾಯಕರು, ಮಧ್ಯ ಪ್ರದೇಶ, ಮಹಾರಾಷ್ಟ್ರ, ಹರಿಯಾಣದಲ್ಲಿ ಯಾಕೆ ನೀಡಿದ್ದಾರೆ. ಅದಕ್ಕೆ ಮೋದಿ ಗ್ಯಾರಂಟಿ ಎಂದು ಹೊಸ ಹೆಸರು ಬೇರೆ. ಕರ್ನಾಟಕದಲ್ಲಿ ಐದೂ ಗ್ಯಾರಂಟಿಗಳು ಜಾರಿಯಾಗಿವೆ. ಅವುಗಳು ನಿಂತಿಲ್ಲ. ನಿಲ್ಲುವದದೂ ಇಲ್ಲ ಎಂದರು.
ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಸೇರಿ ಹಲವು ವಿಪಕ್ಷಗಳು ವಿರೋಧಿಸಿವೆ. ರಾಜ್ಯದ ವಿಧಾನಸಭೆ ಹಾಗೂ ವಿಧಾನ ಪರಿಷ್ನಲ್ಲಿಯೂ ಈ ಕಾಯ್ದೆ ವಾಪಾಸ್ ಪಡೆಯಲು ನಿರ್ಣಯ ಕೈಗೊಳ್ಳಲಾಗಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾದ ಕಾಯ್ದೆಯನ್ನು ಹಿಂಪಡೆಯಬೇಕೆಂಬುದು ಕಾಂಗ್ರೆಸ್ ಆಗ್ರಹವಾಗಿದೆ. ಆದರೆ ಎಸ್ಡಿಪಿಐ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವ ಮೂಲಕ ತಾನು ಬಿಜೆಪಿಯ ಬಿ ಟೀಮ್ ಎಂಬುದನ್ನು ಸಾಬೀತುಪಡಿಸುತ್ತಿದೆ. ಅದು ರಾಜ್ಯ ಸರ್ಕಾರ ಜಾರಿಗೆ ತಂದ ಕಾಯ್ದೆಯಲ್ಲ. ಬದಲಿಗೆ ಕೇಂದ್ರ ಸರ್ಕಾರ ತಂದಿದ್ದು ಎಂಬುದು ಎಸ್ಡಿಪಿಐಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.