ಉಡುಪಿ, ಮಾ.23 (DaijiworldNews/AA): ಮಲ್ಪೆಯ ಮೀನುಗಾರರ ಸಮಸ್ಯೆಯನ್ನು ಸಾಮರಸ್ಯದಿಂದ ಬಗೆಹರಿಸಿ ಎಲ್ಲಾ ಸಮುದಾಯದವರೂ ನೆಮ್ಮದಿಯ ಬದುಕು ರೂಪಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮನವಿ ಮಾಡಿಕೊಂಡಿದ್ದಾರೆ.

ಹಲವಾರು ವರ್ಷಗಳಿಂದ ಒಟ್ಟಾಗಿ ಬದುಕುತ್ತಿದ್ದ ಮಲ್ಪೆಯ ಮೀನುಗಾರರು ಮತ್ತು ರಾಜ್ಯದ ಇತರ ಭಾಗದ ದಿನ ಕೆಲಸಗಾರ ಮಧ್ಯೆ ನೋವಿನ ಘಟನೆಯೊಂದು ನಡೆದು ಹೋಗಿದೆ. ಪ್ರಕರಣದ ಬಗ್ಗೆ ನೋವು ವ್ಯಕ್ತ ಪಡಿಸಿ, ಘಟನೆಯನ್ನು ಒಟ್ಟಾಗಿ ಚರ್ಚಿಸಿ ಪರಿಹಾರ ಮಾಡಿಕೊಂಡಿದ್ದಾರೆ. ಮುಂದೆಂದೂ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವ ಭಾವನೆ ವ್ಯಕ್ತಪಡಿಸಿದ್ದಾರೆ ಎಂದರು.
ಇಂತಹ ಸಮಯದಲ್ಲಿ ಒಂದು ಅಹಿತಕರ ಘಟನೆಯನ್ನು ಇತ್ತಂಡಗಳು ಮರೆತು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಮುಂದಾದಾಗ ವಿನಾಃಕಾರಣ ಕಾನೂನಿನ ಹೆಸರಿನಲ್ಲಿ ಮೀನುಗಾರ ಸಮುದಾಯಕ್ಕೆ ಆತಂಕದ ಪರಿಸ್ಥಿತಿ ಉಂಟು ಮಾಡುವ ಬದಲು, ಈಗಾಗಲೇ ಬಂಧಿತ ಮಹಿಳೆಯರ ಮೇಲಿರುವ ಪ್ರಕರಣ ಹಿಂಪಡೆದು, ಮಲ್ಪೆಯಲ್ಲಿ ಶಾಂತಿ ನೆಲೆಸುವಂತಾಗಲು ಉಡುಪಿ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗೆ ಆದೇಶಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.