ಕಾಸರಗೋಡು, ಜೂ 15 (Daijiworld News/SM): ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಹೆಚ್ಚುವರಿಯಾಗಿ 511 ಮಂದಿಯನ್ನು ಸೇರ್ಪಡೆಗೊಳಿಸಲು ಶನಿವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಂಡೋಸಲ್ಫಾನ್ ಸೆಲ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. 1981 ಮಂದಿಯ ಪಟ್ಟಿ ಈ ಹಿಂದೆ ಅಂಗೀಕರಿಸಿ, ಅವರಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಇದಲ್ಲದೆ 18 ವರ್ಷಕ್ಕಿಂತ ಕಳೆಗಿನವರನ್ನು ಈಗ ಸೇರಿಸಲಾಗಿದೆ. ಇವರಿಗೆ ಸರಕಾರ ಘೋಷಿಸಿರುವ ಎಲ್ಲ ಸೌಲಭ್ಯಗಳು ಲಭಿಸಲಿವೆ ಎಂದರು.
ಈ ಪಟ್ಟಿಗೆ ಅರ್ಹರಾದವರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಜೂ. 25ರಿಂದ ಜುಲೈ 9 ವರೆಗೆ ವಿವಿಧ ಪಂಚಾಯತ್ ಗಳಲ್ಲಿ ಶಿಬಿರ ನಡೆಯಲಿದೆ. ಈ ಹಿಂದಿನ ಶಿಬಿರಗಳಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವ ಸಂತ್ರಸ್ತರು ಈ ಶಿಬಿರದಲ್ಲಿ ಭಾಗವಹಿಸಬಹುದು. ಸಂತ್ರಸ್ತರ ಚಿಕಿತ್ಸೆಯ ಎಲ್ಲಾ ವೆಚ್ಚಗಳನ್ನೂ ಸರಕಾರ ವಹಿಸಿಕೊಳ್ಳಲಿದೆ. ಇದಕ್ಕೆ ಮಿತಿಯನ್ನು ಇನ್ನೂ ನಿಗದಿಪಡಿಸಿಲ್ಲ ಎಂದು ಸಚಿವ ತಿಳಿಸಿದರು.