ಮಂಗಳೂರು, ಮಾ.24 (DaijiworldNews/AA): ವಿಧಾನಸಭೆಯಲ್ಲಿ ಸ್ಪೀಕರ್ ಪೀಠಕ್ಕೇರಿ ದುಂಡಾವರ್ತನೆ ತೋರಿದ್ದ 18 ಶಾಸಕರನ್ನು 6 ತಿಂಗಳು ಅಮಾನತುಗೊಳಿಸಿರುವುದನ್ನು ಶಾಸಕರು ಶಿಕ್ಷೆ ಎಂದು ಭಾವಿಸುವುದು ಬೇಡ. ಇಂತಹ ವರ್ತನೆ ಮುಂದುವರಿಸಿದರೆ ಒಂದು ವರ್ಷ ಅಮಾನತು ಅಥವಾ ಕಾಯ್ದೆಯಡಿ ಲಭ್ಯವಿರುವ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನದ ಕೊನೆಯ ದಿನದಂದು ಧನ ವಿನಿಯೋಗದ ಬಿಲ್ ಮಂಜೂರು ಮಾಡುವ ವೇಳೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗುವ ರೀತಿಯಲ್ಲಿ ಕೆಲ ಶಾಸಕರು ವರ್ತಿಸಿದ್ದರು. ಸಂವಿಧಾನ ಪೀಠದ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆರು ತಿಂಗಳು ಅಮಾನತು ಮಾಡಲಾಗಿದೆ ಎಂದರು.
ಹಿಂದೆ ಇಂತಹ ಘಟನೆಗಳು ಆದರೂ ಈ ರೀತಿಯ ಶಿಕ್ಷೆ ನೀಡಲಾಗಿಲ್ಲ ಎಂದಾದರೆ ಅದು ಹಿಂದಿನ ಸ್ಪೀಕರ್ಗಳಿಗೆ ಆ ಧೈರ್ಯ ಇರಲಿಲ್ಲ ಎಂದು ಅರ್ಥ. ಅದರಿಂದಾಗಿಯೇ ಶಾಸಕರು ಏನೂ ಆಗದು ಎಂಬ ಧೈರ್ಯದಲ್ಲಿ ಈ ರೀತಿ ವರ್ತಿಸಿ ರಾಜ್ಯದ ಘನತೆಗೆ ಕುಂದು ತಂದಿದ್ದಾರೆ. ರಾಜ್ಯದಲ್ಲಿ ಸದನಕ್ಕಿಂತ ದೊಡ್ಡ ಸಂವಿಧಾನ ಸಂಸ್ಥೆ ಬೇರಿಲ್ಲ. ಅಧ್ಯಕ್ಷ ಪೀಠಕ್ಕಿಂತ ದೊಡ್ಡದು ಅಲ್ಲಿ ಬೇರೆ ಇಲ್ಲ ಎಂಬ ಅರಿವು ಶಾಸಕರಿಗೆ ಇರಬೇಕು. ಸಭಾಧ್ಯಕ್ಷನಾಗಿ ಈ ರೀತಿಯ ವರ್ತನೆ ಸಹಿಸಲು ಅಸಾಧ್ಯ ಹಾಗಾಗಿ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಿಕ್ರಿಯಿಸಿದರು.