ಮಂಗಳೂರು, ಮಾ.26 (DaijiworldNews/AA): ಬೆಂಗಳೂರಿನಲ್ಲಿ 75 ಕೋಟಿ ರೂ. ಮಾಲ್ಯದ ಎಂಡಿಎಂಎ ಡ್ರಗ್ಸ್ ಸಹಿತವಾಗಿ ಮಂಗಳೂರು ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ ದಕ್ಷಿಣ ಆಫ್ರಿಕಾದ ಇಬ್ಬರು ಮಹಿಳೆಯರ ಪೊಲೀಸ್ ಕಸ್ಟಡಿ ಸೋಮವಾರಕ್ಕೆ ಅಂತ್ಯವಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ ಕಾರಗೃಹದಲ್ಲಿರುವ ಅವರಿಬ್ಬರು ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನಲಾಗಿದೆ.

ದಕ್ಷಿಣ ಆಫ್ರಿಕಾದ ಪ್ರಜೆಗಳಾದ ಬಂಬಾ ಫಾಂಟಾ ಆಲಿಯಾಸ್ ಅಡೊನಿಸ್ ಜಬುಲೈಲ್ (31) ಮತ್ತು ಒಲಿಜೊ ಇವನ್ಸ್ ಆಲಿಯಾಸ್ ಅಬಿಗೈಲ್ ಅಡೊನಿಸ್ (30) ಬಂಧಿತ ಆರೊಪಿ ಮಹಿಳೆಯರು. ವಿಚಾರಣೆ ವೇಳೆ ಈ ಆರೋಪಿಗಳು ಸಹಕಾರ ನೀಡದ ಹಿನ್ನಲೆ ಇಲ್ಲಿನ ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಲಭ್ಯವಿರುವ ತಾಂತ್ರಿಕ ಪುರಾವೆಗಳ ವಿಶ್ಲೇಷಣೆಗಳ ಮೂಲಕವೇ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದಾರೆ.
ಮಾರ್ಚ್ 14ರಂದು ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದ ದಕ್ಷಿಣ ಆಫ್ರಿಕಾದ ಈ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಅವರ ಬಳಿಯಿದ್ದ ಎರಡು ಟ್ರಾಲಿ ಬ್ಯಾಗ್ ಗಳಲ್ಲಿ ಸಾಗಾಟ ಮಾಡಿದ್ದ 75 ಕೋಟಿ ರೂ ಮೌಲ್ಯದ 37.585 ಕೆಜಿ ಎಂಡಿಎಂಎ, ನಾಲ್ಕು ಮೊಬೈಲ್ ಫೋನ್ ಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದರು.
ಆರೋಪಿಗಳ ಪೊಲೀಸ್ ಕಸ್ಟಡಿಯ ಅವಧಿ ಸೋಮವಾರಕ್ಕೆ ಮುಕ್ತಾಯವಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ. ವಿಚಾರಣೆ ವೇಳೆ ಅವರು ನಮ್ಮ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿಲ್ಲ. ಎಂಡಿಎಂಎ ಮಾರಾಟ ಜಾಲದ ಹಿಂದಿರುವ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಬೇರೆ ಮಾರ್ಗೋಪಾಯಗಳನ್ನು ಹುಡುಕಬೇಕಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಸಿಸಿಬಿ ಪೊಲೀಸರು ಬೆಂಗಳೂರಿಗೆ ಹಾಗೂ ನವದೆಹಲಿಗೆ ತೆರಳಿ ಈ ಪ್ರಕರಣದ ಮಹಜರು ಹಾಗೂ ಕಾನೂನು ಸಂಬಂಧಿಸಿದ ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಈ ಆರೋಪಿಗಳ ಬಂಧನದ ಬಳಿಕ ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದವರು ಜಾಗೃತರಾಗಿದ್ದಾರೆ. ಕೆಲ ಸಮಯ ಅವರು ಚಟುವಟಿಕೆಗಳನ್ನು ನಿಲ್ಲಿಸಿರುವಂತೆ ಕಾಣುತ್ತಿದೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದ ತಾಂತ್ರಿಕ ಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸುವ ಮೂಲಕ ಈ ಮಾದಕ ವಸ್ತು ಮಾರಾಟ ಜಾಲದ ಮೂಲವನ್ನು ತಲುಪಲು ಯತ್ನಿಸುತ್ತಿದ್ದೇವೆ' ಎಂದು ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ನಮ್ಮ ಪೊಲೀಸರು ಈ ಪ್ರಕರಣದ ತನಿಖೆಯನ್ನು ಇನ್ನಷ್ಟು ವಿಸ್ತ್ರತವಾಗಿ ಕೈಗೊಳ್ಳಲಿದ್ದಾರೆ. ವಿಮಾನನಿಲ್ದಾಣಗಳ ಸಿಸಿಟಿವಿ ಕ್ಯಾಮೆರಾಗಳಿಂದ ಕಲೆಹಾಕಿರುವ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳು ನವದೆಹಲಿಯಲ್ಲಿ ವಾಸವಿದ್ದ ಮನೆಗಳಿಗೂ ನಮ್ಮ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಲ್ಲಿ ಮಹತ್ವದ ಪುರಾವೆಗಳು ಲಭ್ಯವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.