ಉಡುಪಿ, ಮಾ.26 (DaijiworldNews/AA): ಉಡುಪಿ ನ್ಯಾಯಾಲಯದ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಗಣಪತಿ ವಿ. ನಾಯ್ಕ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ವರದಿಗಳ ಪ್ರಕಾರ, ಮರಳಿನಿಂದ ತುಂಬಿದ ವಾಹನವನ್ನು ಬಿಡುಗಡೆ ಮಾಡಲು ಸಂಬಂಧಿಸಿದಂತೆ ನಾಯ್ಕ್ 2,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಪೊಲೀಸರು ಉಡುಪಿ ನ್ಯಾಯಾಲಯದೊಳಗಿನ ಅವರ ಕಚೇರಿಯಲ್ಲಿ ಕಾರ್ಯಾಚರಣೆ ನಡೆಸಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ದೂರುದಾರರು ಪರಿಚಯದ ವ್ಯಕ್ತಿಯೊಬ್ಬರ ವಾಹನದಲ್ಲಿ ಮೂಲ್ಕಿಯಿಂದ ಉಡುಪಿಗೆ ಮರಳು ಸಾಗಿಸುತ್ತಿರುವಾಗ ನಿಟ್ಟೂರು ಬಳಿಯಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಅಧಿಕಾರಿಯವರು ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಾಗಿತ್ತು. ವಾಹನದ ಬಿಡುಗಡೆಯ ಮುಂದಿನ ಕ್ರಮಗಳಿಗಾಗಿ ಜಿ.ಪಿ.ಎ ಹೊಂದಿದ ದೂರುದಾರರು ಮಾನ್ಯ ಪ್ರಿನ್ಸಿಪಾಲ್ ಸಿವಿಲ್ ಮತ್ತು ಜೆ.ಎಂ.ಎಫ್ ಸಿ ಉಡುಪಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಈ ವಾಹನದ ಬಿಡುಗಡೆಯ ಬಗ್ಗೆ ಮುಂದಿನ ಕ್ರಮಗಳಿಗಾಗಿ ಆಕ್ಷೇಪಣೆ ಸಲ್ಲಿಸಲು ಗಣಪತಿ ನಾಯ್ಕ್ ಅವರು ದೂರದಾರರ ಬಳಿ 2,000 ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಆದರೆ ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗೆ ಅವರು ದೂರು ನೀಡಿರುತ್ತಾರೆ.
ಇದೀಗ ಇಂದು ಗಣಪತಿ ನಾಯ್ಕ್ ಅವರು ದೂರುದಾರರಿಂದ 2,000 ರೂ. ಲಂಚದ ಹಣವನ್ನು ಸ್ವೀಕರಿಸುವಾಗ ನ್ಯಾಯಾಲಯದ ಸಂಕೀರ್ಣದಲ್ಲಿರುವ ಎ.ಪಿ.ಪಿರವರ ಕೊಠಡಿಯಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸದ್ಯ ಅಧಿಕಾರಿಯವರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.
ಮಂಗಳೂರು ಉಸ್ತುವಾರಿ ಎಸ್ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಉಡುಪಿ ಉಸ್ತುವಾರಿ ಡಿವೈಎಸ್ಪಿ ಮಂಜುನಾಥ್, ಇನ್ಸ್ಪೆಕ್ಟರ್ ರಾಜೇಂದ್ರ ನಾಯಕ್ ಎಂ.ಎನ್., ಎಎಸ್ಐ ನಾಗೇಶ್ ಉಡುಪ ಮತ್ತು ಇತರ ತಂಡದ ಸದಸ್ಯರಾದ ನಾಗರಾಜ್, ಸತೀಶ್ ಹಂದಾಡಿ, ರೋಹಿತ್, ಮಲ್ಲಿಕಾ, ಪುಷ್ಪಾವತಿ, ರವೀಂದ್ರ, ರಮೇಶ್, ಅಬ್ದುಲ್ ಜಲಾಲ್, ಪ್ರಸನ್ನ, ರಾಘವೇಂದ್ರ ಹೊಸಕೋಟೆ, ಸುಧೀರ್ ಮತ್ತು ಸತೀಶ್ ಆಚಾರ್ಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.