ಉಡುಪಿ, ಜೂ16(Daijiworld News/SS): ಉಡುಪಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ವಾಯು ಚಂಡಮಾರುತದ ಭೀತಿಯಿಂದ ಮಲ್ಪೆ ಬೀಚ್ನಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದ್ದು, ಕಡಲ ಕಿನಾರೆಗೆ ಬರುವ ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ.
ಮಲ್ಪೆಯ ಕಿನಾರೆಯಲ್ಲೆ ಅಲೆಗಳ ಆರ್ಭಟ ಹೆಚ್ಚಾಗಿದೆ. ಭಾರೀ ಮಳೆಯಿಂದಾಗಿ ಮಲ್ಪೆ ಬೀಚ್ ಕಸಕಡ್ಡಿ, ಮರದ ದಿಮ್ಮಿ, ಪ್ಲಾಸ್ಟಿಕ್ ಬಾಟಲಿ, ಸೊಪ್ಪಿನಿಂದ ತುಂಬಿಕೊಂಡಿದ್ದು ಕುರೂಪವಾಗಿದೆ. ಈಗಾಗಲೇ ಕಡಲ ಅಬ್ಬರ ಜೋರಾಗಿರುವುದರಿಂದ ಪ್ರವಾಸಿಗರು ಸಮುದ್ರಕ್ಕೆ ಇಳಿಯಬಾರದೆಂದು ಬೀಚ್ ಸಿಬ್ಬಂದಿ ಸೂಚನೆ ಹೊರಡಿಸಿದ್ದಾರೆ. ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯು ಪ್ರವಾಸಿಗರು ನೀರಿಗಿಳಿಯದಂತೆ ತಡೆಯಲು ಬೀಚ್ನ ಸುತ್ತಲೂ 7 ಅಡಿ ಎತ್ತರದ ನೆಟ್ ಅಳವಡಿಸಿದ್ದಾರೆ. ನೆಟ್ ದಾಟಿ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸಂದೇಗಳನ್ನು ನೀಡಲಾಗುತ್ತಿದೆ.
ಅರಬ್ಬೀ ಸಮುದ್ರದಲ್ಲಿ ವಾಯು ಚಂಡಮಾರುತದ ಪ್ರಭಾವದಿಂದ ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಮಲ್ಪೆ ಬೀಚ್ನಲ್ಲಿ ದೈತ್ಯ ಅಲೆಗಳು ತೀರಕ್ಕೆ ಬಡಿಯುತ್ತಿವೆ. ಅಲೆಗಳ ಅಬ್ಬರ ಜೋರಾಗಿರುವ ಹಿನ್ನೆಲೆಯಲ್ಲಿ, ಪ್ರವಾಸಿಗರಿಗೆ ಬೀಚ್ಗೆ ಇಳಿಯದಂತೆ ನಿಷೇಧ ಹೇರಲಾಗಿದ್ದು, ಬೀಚ್ನ ಸುತ್ತಲೂ ತಡೆ ಬೇಲಿ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಕಡಲ ಕಿನಾರೆಯಲ್ಲಿ ಅಪಾಯದ ಮುನ್ಸೂಚನೆ ಸಾರುವ ಕೆಂಪು ಬಾವುಟಗಳನ್ನು ಎಲ್ಲೆಡೆ ಹಾಕಲಾಗಿದೆ. ಪ್ರವಾಸಿಗರಿಗೆ ಪದೇ ಪದೇ ಧ್ವನಿವರ್ಧಕಗಳ ಮೂಲಕವೇ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಕಾರ್ಯ ನಿರ್ವಾಹಕ ಸುದೇಶ್ ಶೆಟ್ಟಿ ಹೇಳಿದ್ದಾರೆ.
ಈಗಾಗಲೇ ಬೀಚ್ ತೀರದಲ್ಲಿ ಹಾಕಲಾಗಿದ್ದ 8 ನೆಟ್ಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ. ಆಗಸ್ಟ್ ನಂತರ ಮತ್ತೆ ಹಟ್ಗಳನ್ನು ಹಾಕಲಾಗುವುದು. ಅಳವಡಿಸಿರುವ ನೆಟ್ ಅನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ತೆಗೆಯಲಾಗುತ್ತದೆ. ಸಮುದ್ರ ಶಾಂತವಾಗಿದ್ದರೆ ಹಳದಿ ಬಾವುಟ ಅಳವಡಿಸಲಾಗುವುದು. ಸಧ್ಯ ಬೀಚ್ನಲ್ಲಿ 8 ಜೀವ ರಕ್ಷಕರು ಹಾಗೂ 6 ಹೋಂ ಗಾರ್ಡ್ಸ್ಗಳನ್ನು ನಿಯೋಜಿಸಲಾಗಿದೆ. ರಕ್ಷಣಾ ಪರಿಕರಗಳನ್ನು ವಿತರಿಸಲಾಗಿದೆ. ಪ್ರವಾಸಿಗರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.