ಬಂಟ್ವಾಳ, ಮಾ.29 (DaijiworldNews/AA): ಮಂಗಳೂರು ನಗರ ಸ್ಮಾರ್ಟ್ ಸಿಟಿಯೆಂಬ ಹೆಗ್ಗಳಿಕೆಯಲ್ಲಿ ಬೀಗುತ್ತಿದ್ದರೆ, ಈ ಸಿಟಿಯ ಜನರು ಕುಡಿಯುವ ನೀರು ಮಾತ್ರ ಬಂಟ್ವಾಳದಲ್ಲಿ ಹರಿಯುವ ನೇತ್ರಾವತಿ ನದಿಯ ಒಡಲು ಸೇರುವ ಕೊಳಚೆ ನೀರನ್ನು ಎಂಬುದು ದುರದೃಷ್ಟಕರ ಸಂಗತಿ ಎಂದರೆ ತಪ್ಪಾಗಲಾರದು.






ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಎಂಬ ವ್ಯವಸ್ಥೆಯೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗದೇ ಇರುವ ಹಿನ್ನಲೆಯಲ್ಲಿ ಪುರಸಭಾ ವ್ಯಾಪ್ತಿಯ ಸುಮಾರು 12 ಕಡೆಗಳಲ್ಲಿ ಕಣ್ಣಿಗೆ ರಾಚುವಂತೆ ಕೊಳಕು ನೀರು ನೇರವಾಗಿ ನೇತ್ರಾವತಿಯ ಒಡಲಿಗೆ ಸೇರುತ್ತಿದೆ. ಇಂತಹ ಗಂಭೀರ ವಿಚಾರ ಬಂಟ್ವಾಳ ಪುರಸಭೆ, ಜಿಲ್ಲಾಡಳಿತ, ಮನಪಾ ಅಧಿಕಾರಿಗಳ ಗಮನಕ್ಕೆ ಬಂದಿಲ್ಲದಿರುವುದು ಅಚ್ಚರಿಯ ಸಂಗತಿಯಾಗಿದೆ.
ಬಂಟ್ವಾಳದ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಅತೀ ಹೆಚ್ಚು ಕಡೆಗಳಲ್ಲಿ ಕೊಳಚೆ ನೀರು, ಕೊಳೆತ ತ್ಯಾಜ್ಯವಸ್ತುಗಳು ನೇತ್ರಾವತಿ ಒಡಲಿಗೆ ಸೇರುತ್ತಿದೆ. ಬಿ.ಸಿ.ರೋಡು ನಗರದಲ್ಲಿ ಅತೀ ಹೆಚ್ಚು ವಸತಿ ಸಂಕೀರ್ಣ, ಮನೆಗಳು, ಹೊಟೇಲ್ ಗಳ ಇದ್ದು,ಇವುಗಳ ಮಲೀನ ನೀರು ಚರಂಡಿಯ ಮೂಲಕ ನದಿ ಸೇರಿದರೆ, ತ್ಯಾಜ್ಯವಸ್ತುಗಳು, ಬಾಟಲ್ ಸಹಿತ ಇನ್ನಿತರ ವಸ್ತುಗಳು ನದಿಯಲ್ಲಿ ತೇಲಾಡುತ್ತ ಇರುತ್ತದೆ.
ಬಂಟ್ವಾಳ ಪುರಸಭೆಗೆ 2011 ರಲ್ಲಿ 16.62 ಕೋ.ರೂ.ವೆಚ್ಚದಲ್ಲಿ ಒಳಚರಂಡಿ ಯೋಜನೆಗೆ ಮಂಜೂರಾತಿ ದೊರೆತು ಕಾಮಗಾರಿಯು ಆರಂಭಗೊಂಡಿತ್ತು. ಪುರಸಭೆಯ ಬೌಗೋಳಿಕ ಸ್ಥಿತಿಗನುಸಾರವಾಗಿ 7 ವೆಟ್ ವೆಲ್ ಹಾಗೂ 2 ಮಲೀನ ನೀರು ಶುದ್ದೀಕರಣ ಘಟಕ ನಿರ್ಮಾಣವಾಗಬೇಕು. ಇದನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಗತಗೊಳಿಸಬೇಕಾಗಿದ್ದು, ಗುತ್ತಿಗೆ ವಹಿಸಿಕೊಂಡವರು ಕಾಮಗಾರಿಯನ್ನು ಕಾರ್ಯಗತಗೊಳಿಸಿದ್ದರು. ವೆಟ್ ವೆಲ್ ಮತ್ತು ಮಲೀನ ನೀರು ಶುದ್ದೀಕರಣ ಘಟಕಕ್ಕೆ ಜಮೀನು ಕೂಡ ಗುರುತಿಸಲಾಗಿತ್ತು. ಈ ಪೈಕಿ ವೆಟ್ ವೆಲ್ ನಿರ್ಮಾಣಕ್ಕೆ ಐದು ಕಡೆ ಜಮೀನು ಸಂಬಂಧಪಟ್ಟವರಿಗೆ ಹಸ್ತಾಂತರವಾದರೆ, ಎರಡು ಕಡೆ ಜಮೀನು ಹಸ್ತಾಂತರವಾಗಿಲ್ಲ.
ಒಂದು ಕಡೆ ಕೋರ್ಟ್ ತಡೆಯಾಜ್ಞೆ, ಮತ್ತೊಂದು ಕಡೆಯ ಜಮೀನಿನಲ್ಲಿ ದೊಡ್ಡಮಟ್ಟದ ಗೋಲ್ ಮಾಲ್ ನಡೆದಿದೆ ಎನ್ನುವ ಆರೋಪದ ಬಗ್ಗೆ ಗುರುವಾರ ನಡೆದ ಪುರಸಭೆಯ ಸಾಮಾನ್ಯಸಭೆಯಲ್ಲಿ ಗಂಭೀರ ಚರ್ಚೆ ನಡೆದಿತ್ತು. ಈ ನೀರನ್ನು ಪರೀಕ್ಷೆಗೊಳಪಡಿಸಿದರೆ ಉಪಯೋಗಕ್ಕೆ ಬಳಸುವುದೇ ಅಪಾಯ ಎಂಬ ವರದಿ ಬಂದರೂ ಅಚ್ಚರಿ ಇಲ್ಲ. ಹಾಗಾಗಿ ಡಿಸಿ, ಮನಪಾ ಆಯುಕ್ತರು ಚರಂಡಿಯ ಕೊಳಚೆ ನೀರು ನೇರ ನೇತ್ರಾವತಿ ನದಿ ನೀರಿಗೆ ಸೇರುವ ಜಾಗ ಪರಿಶೀಲಿಸಿ, ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.