ಉಡುಪಿ, ಮಾ.29 (DaijiworldNews/AA): ವಿಜಯನಗರ ಕಾಲದ ಶಾಸನವೊಂದು ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಹೆರವಳ್ಳಿಯಲ್ಲಿ ಪತ್ತೆಯಾಗಿದೆ.

ದೊರೆತಿರುವ ಈ ಶಾಸನದಲ್ಲಿ ಶೃಂಗೇರಿ ಮಠದ 14ನೇ ಶ್ರೀಗಳಾದ ಶ್ರೀ ನರಸಿಂಹ ಭಾರತಿ ಶ್ರೀಪಾದರು ಅಂದರೆ ಹಾಲಾಡಿ ಒಡೆಯರು ಭೂ ದಾನ ನೀಡಿರುವ ಸಾಧ್ಯತೆಯಿದೆ ಎಂದು ಶೃಂಗೇರಿ ಮಠದ ಸಂಶೋಧಕರು ತಿಳಿಸಿದ್ದಾರೆ.
5 ಅಡಿಗಿಂತ ಎತ್ತರ, ಎರಡೂ ಕಾಲು ಅಡಿ ಅಗಲವಿರುವ ಈ ಶಾಸನದ ಮೇಲೆ ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ. ಶಾಸನದ ಬಲ ಭಾಗದಲ್ಲಿ ಕೈ ಮುಗಿದು ಕುಳಿತಿರುವ ಭಕ್ತರ ಚಿತ್ರ ಇದೆ. ಜೊತೆಗೆ ಒಂದು ದೀಪದ ಕಂಬ ಹಾಗೂ ಮಧ್ಯಭಾಗದಲ್ಲಿ ಶಿವಲಿಂಗವಿದೆ. ಶಾಸನದ ಎಡಭಾಗದಲ್ಲಿ ಕರುವಿಗೆ ಹಾಲುಣಿಸುತ್ತಿರುವ ಗೋವು ಹಾಗೂ ಮೇಲ್ಭಾಗದಲ್ಲಿ ಸೂರ್ಯ ಚಂದ್ರರ ಕೆತ್ತನೆ ಇದೆ. ಈ ಶಾಸನವು ವಿಜಯನಗರದ ಅರಸ ಇಮ್ಮಡಿ ಹರಿಹರರಾಯನ ಕಾಲಘಟ್ಟದ ಶಾಸನವಾಗಿದೆ ಎಂದು ಹೇಳಲಾಗಿದೆ.