ಮಂಗಳೂರು,ಮಾ.30(DaijiworldNews/TA): ಮಂಗಳೂರಿನಿಂದ ಬೆಂಗಳೂರುವರೆಗೆ ಚತುಷ್ಪಥ ರಸ್ತೆ ಮಾಡಲು ಈಗಾಗಲೇ ಡಿಪಿಆರ್ ಸಿದ್ಧಗೊಂಡಿದೆ. ಆದರೆ ಶಿರಾಡಿ ಘಾಟಿಯ ಸಮಸ್ಯೆಗಳನ್ನು ಬಗೆಹರಿಸುವುದು ರಾಜ್ಯ ಸರ್ಕಾರದ ಹೊಣೆ. ಕೇಂದ್ರ ಸರ್ಕಾರ ರಸ್ತೆ ಅಭಿವೃದ್ಧಿಗೆ ಅನುಮೋದನೆ ನೀಡಿದರೂ ರಾಜ್ಯ ಸರ್ಕಾರ ಸಹಕರಿಸುತ್ತಿಲ್ಲ. ಇದರಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ಕೇಂದ್ರ ಸರ್ಕಾರದಿಂದ ಪ್ರಸ್ತಾಪಿತ ಪ್ರತೀ ಯೋಜನೆಗಳಿಗೂ ರಾಜ್ಯ ಸರ್ಕಾರದ ಸಹಕಾರ ಅಗತ್ಯ. ದಕ್ಷಿಣ ಕನ್ನಡದಲ್ಲಿ ಹಲವು ಕಾಮಗಾರಿಗಳು ನೆನೆಗುದಿಗೆ ಬೀಳಲು ರಾಜ್ಯ ಸರ್ಕಾರವೇ ಕಾರಣ. ಭೂ ಸ್ವಾಧೀನ ಪ್ರಕ್ರಿಯೆ ನಡೆಯದ ಕಾರಣ ಹೆದ್ದಾರಿ ಸ್ಥಗಿತಗೊಂಡಿದೆ.
ಮಂಗಳೂರು ಬೆಂಗಳೂರು ನಾಲ್ಕು ಲೈನ್ ಹೆದ್ದಾರಿಗೆ ಶಿರಾಡಿ ಘಾಟಿಯಲ್ಲಿ ಸಮಸ್ಯೆಗಳಿವೆ. ಅಲ್ಲಿನ ಮರ ತೆರವುಗೊಳಿಸಲು ಅರಣ್ಯ ಇಲಾಖೆಯ ಸಹಕಾರ ಅಗತ್ಯವಿದೆ. ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಬೇಕಿದೆ. ಈ ಹಿನ್ನೆಲೆಯಲ್ಲಿ ನಾನು ರಾಜ್ಯ ಸಚಿವ ಸತೀಶ್ ಜಾರಿಕಿಹೊಳಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ ಎಂದರು.