ಮಂಗಳೂರು, ಮಾ.30(DaijiworldNews/TA): ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸಂವಿಧಾನ ವಿರೋಧಿ ರೀತಿ ವರ್ತಿಸುತ್ತಿದ್ದು, ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಅದರಲ್ಲೂ ಡಿಕೆ ಶಿವಕುಮಾರ್ ಅವರು ತಮ್ಮ ಮನಸ್ಸಿನಲ್ಲಿರುವುದನ್ನು ತಿಳಿಸಿದ್ದಾರೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ವಿಧಾನ ಸಭಾಧ್ಯಕ್ಷರು ಸರ್ಕಾರದ ಏಜೆಂಟ್ ತರ ವರ್ತಿಸಿದ್ದು, ಜನರ ಹಕ್ಕುಗಳನ್ನು ಕಸಿಯುವ ತಂತ್ರವಾಗಿದೆ. ಸಂವಿಧಾನ ವಿರೋಧಿ ಮಸೂದೆಗಳನ್ನು ಪಾಸ್ ಮಾಡುವುದನ್ನು ವಿರೋಧಿಸಿದ ಶಾಸಕರನ್ನು ಅಮಾನತು ಮಾಡುವ ಕೆಟ್ಟ ಸಂಪ್ರದಾಯಕ್ಕೆ ಕಾಂಗ್ರೆಸ್ ನಾಂದಿ ಹಾಡಿದ್ದು, ಇದನ್ನು ನಾನು ಖಂಡಿಸುತ್ತೇನೆ.
ಮಸ್ಲಿಮರಿಗೆ ಗುತ್ತಿಗೆ ಕಾಮಗಾರಿಯಲ್ಲಿ ನಾಲ್ಕು ಶೇಖಡಾ ಮೀಸಲಾತಿಯನ್ನು ವಿರೋಧಿಸಿದ ಚೌಟರು, ಇದೊಂದು ಸಂವಿಧಾನ ವಿರೋಧಿ ನಿಲುವಾಗಿದ್ದು, ಇದರಿಂದ ಮುಂದೆ ದೇಶದಲ್ಲಿ ಧರ್ಮ ವಿಭಜನೆಗೆ ಕಾರಣವಾಗಬಹುದು. ಕಾಂಗ್ರೆಸ್ ನ ಹಿರಿಯರೂ ಮಾಡದ ಕೆಲಸವನ್ನು ಕಾಂಗ್ರೆಸ್ ಮತರಾಜಕಾರಣ ಮಾಡುತ್ತಿದೆ ಎಂದು ದೂರಿದರು.