ಮಂಗಳೂರು, ಮಾ.30(DaijiworldNews/TA): ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಜಂಕ್ಷನ್ ನ ಮುತ್ತೂಟ್ ಫೈನಾನ್ಸ್ ದರೋಡೆಗೆ ಯತ್ನಿಸಿದ ಇಬ್ಬರನ್ನು ಬಂಧಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಕಳ್ಳರು ಬೀಗ ಒಡೆಯುತ್ತಿರುವಾಗಲೇ ಫೈನಾನ್ಸ್ ಮಳಿಗೆಯ ಸೈರನ್ ಮೊಳಗಿದ್ದು, ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ದೇರಳಕಟ್ಟೆ ಜಂಕ್ಷನ್ ನಲ್ಲಿರುವ ವಾಣಿಜ್ಯ ಕಟ್ಟಡದ ಮೇಲಂತಸ್ತಿನಲ್ಲಿ ಕಾರ್ಯಾಚರಿಸುತ್ತಿರುವ ಮುತ್ತೂಟ್ ಫೈನಾನ್ಸ್ ಗೆ ಕೇರಳ ಮೂಲದ ಮೂವರು ಖದೀಮರು ಕನ್ನ ಹಾಕಿದ್ದಾರೆ. ಇನ್ನೇನು ಕಳ್ಳತನ ನಡೆಸಲು ಮಳಿಗೆಯ ಬೀಗ ಒಡೆಯುತ್ತಿರುವಾಗಲೇ ಸೈರನ್ ಮೊಳಗಿದ್ದು ಮುತ್ತೂಟ್ ಫೈನಾನ್ಸ್ ನ ಕಂಟ್ರೋಲ್ ರೂಂಗೆ ಮಾಹಿತಿ ರವಾನೆಯಾಗಿದೆ. ಫೈನಾನ್ಸ್ ನ ಮೇಲಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಸ್ಥಳದಲ್ಕಿ ಸೈರನ್ ಮೊಳಗುತ್ತಿದ್ದಾಗಲೇ ಫೈನಾನ್ಸ್ ಸುತ್ತ ಮುತ್ತಲೂ ಸ್ಥಳೀಯರು ಜಮಾಯಿಸಿದ್ದು ಇಬ್ಬರು ಆರೋಪಿಗಳಾದ ಕಾಂಞಂಗಾಡ್ ನ ಮುರಳಿ ಮತ್ತು ಕಾಸರಗೋಡಿನ ಹರ್ಷದ್ ಕಟ್ಟಡದಲ್ಲಿ ಲಾಕ್ ಆಗಿದ್ದು ಸ್ಥಳಕ್ಕೆ ಧಾವಿಸಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳು ಮತ್ತು ಕೃತ್ಯ ಎಸಗಲು ತಂದಿದ್ದ ಡ್ರಿಲ್ ಮೆಷಿನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಆರೋಪಿ ಕಾಸರಗೋಡು ಮೂಲದ ಅಬ್ದುಲ್ ಲತೀಫ್ ಪರಾರಿಯಾಗಿದ್ದಾನೆ.
ದೇರಳಕಟ್ಟೆಯ ಮುತ್ತೂಟ್ ಫೈನಾನ್ಸ್ ನಲ್ಲಿ ಉತ್ಕೃಷ್ಟ ಮಟ್ಟದ ರಕ್ಷಣಾ ಸಲಕರಣೆ ಅಳವಡಿಸಿದ ಪರಿಣಾಮ ಸಂಭವನೀಯ ಕಳವು ಪ್ರಕರಣವೊಂದು ವಿಫಲವಾಗಿದೆ. ಘಟನಾ ಸ್ಥಳಕ್ಕೆ ಎಸಿಪಿ ಧನ್ಯ ನಾಯಕ್, ಕೊಣಾಜೆ ಇನ್ಸ್ ಪೆಕ್ಟರ್ ರಾಜೇಂದ್ರ ನೇತೃತ್ವದ ತಂಡ ಭೇಟಿ ನೀಡಿ ತನಿಖೆ ನಡಸಿದ್ದಾರೆ.