ಉಡುಪಿ, ಮಾ.30 (DaijiworldNews/AA): ಮಣಿಪಾಲದ WGSHA ಕಾಲೇಜಿನ ಬಳಿ ಮಾ. 29ರಂದು ಹಗಲು ದರೋಡೆ ನಡೆದಿದ್ದು, ಪಾದಾಚಾರಿ ಮಹಿಳೆಯೊಬ್ಬರ 3.5 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಅಪರಿಚಿತ ವ್ಯಕ್ತಿಯೋರ್ವ ಕದ್ದು ಪರಾರಿಯಾಗಿದ್ದಾನೆ.

ಪರ್ಕಳದ ಹೇರ್ಗಾ ನಿವಾಸಿ ವಸಂತಿ (51) ಅವರ ಸುಮಾರು 45 ಗ್ರಾಂ ತೂಕದ, ಅಂದಾಜು 3,50,000 ರೂ. ಮೌಲ್ಯದ ಚಿನ್ನದ ಸರ ಕಳವಾಗಿದೆ.
ಮಣಿಪಾಲದ ಖಾಸಗಿ ಆಸ್ಪತ್ರೆಯ ಬಿಲ್ಲಿಂಗ್ ವಿಭಾಗದಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ವಸಂತಿ ಅವರು ಸಂಜೆ 5:30 ರ ಸುಮಾರಿಗೆ ತಮ್ಮ ಕರ್ತವ್ಯ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರು WGSHA ಕಾಲೇಜಿನ ಹಿಂಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಅಪರಿಚಿತ ವ್ಯಕ್ತಿಯೋರ್ವ ಬಲವಂತವಾಗಿ ವಸಂತಿ ಅವರ ಕುತ್ತಿಗೆಯನ್ನು ಹಿಡಿದಿದ್ದಾನೆ. ಬಳಿಕ ಆತ ವಸಂತಿ ಅವರು ಧರಿಸಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.