ಮಂಗಳೂರು, ಮಾ.30 (DaijiworldNews/AA): ನಗರದಿಂದ ಕೇರಳ ರಾಜ್ಯಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಹಳೆಯ ನೇತ್ರಾವತಿ ಸೇತುವೆಯಲ್ಲಿ (ತಲಪಾಡಿ - ಮಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಏ. 1 ರಿಂದ ಏ. 30ರ ವರೆಗೆ ಅಂದರೆ ಸುಮಾರು 30 ದಿನಗಳು ಪ್ರಮುಖ ದುರಸ್ತಿ ಕಾಮಗಾರಿ ನಡೆಸಲಿದೆ.

ಹೀಗಾಗಿ ಒಂದು ಸೇತುವೆಯಲ್ಲಿ (ಮಂಗಳೂರು ನಗರದಿಂದ ತಲಪಾಡಿ ಕಡೆಗೆ ಹೋಗುವ) ವಾಹನಗಳ ಸಂಚಾರಕ್ಕಾಗಿ ದ್ವಿಮುಖ ಸಂಚಾರ ವ್ಯವಸ್ಥೆ ಮಾಡಲಾಗಿರುತ್ತದೆ. ಇದರಿಂದ ಪಂಪ್ವೆಲ್ ನಿಂದ ತೊಕ್ಕೊಟ್ಟು ವರೆಗೆ ಸದ್ರಿ ಹೆದ್ದಾರಿಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ.
ಇದರಿಂದಾಗಿ ಹಳೆಯ ನೇತ್ರಾವತಿ ಸೇತುವೆಯಲ್ಲಿ ದುರಸ್ತಿ ಕಾಮಗಾರಿ ನಡೆಯುವ ದಿನಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿದ್ದು, ನೇತ್ರಾವತಿ ಸೇತುವೆಯ ಮೂಲಕ ಸಂಚರಿಸುವ ಎಲ್ಲಾ ವಾಹನಗಳ ಚಾಲಕರು/ ಸವಾರರು ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದ ಚಲಿಸಬೇಕು ಹಾಗೂ ಪೀಕ್ ಅವರ್ಸ್ ಗಳಲ್ಲಿ ಸದರಿ ಮಾರ್ಗದಲ್ಲಿ ವಾಹನ ಸಂಚಾರ ಮಾಡದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸಾರ್ವಜನಿಕರಿಗಾಗಿ ಪರ್ಯಾಯ ಮಾರ್ಗಗಳು
*ಮುಡಿಪು-ಕೊಣಾಜೆ-ದೇರಳಕಟ್ಟೆ ಕಡೆಯಿಂದ ಮಂಗಳೂರು ನಗರ ಕಡೆಗೆ ಸಂಚರಿಸುವ ಸ್ಥಳೀಯ ಲಘು ವಾಹನಗಳು/ದ್ವಿಚಕ್ರ ವಾಹನಗಳು ಕೊಣಾಜೆ- ಹರೇಕಳ(ಬ್ರಿಡ್ಜ್ ಅಡ್ಯಾರ್ ಮುಖಾಂತರ ಮಂಗಳೂರು ಕಡೆಗೆ ಸಂಚರಿಸಬಹುದಾಗಿದೆ.
*ಮಂಗಳೂರು ಕಡೆಯಿಂದ ಕೊಣಾಜೆ-ಮುಡಿಪು-ದೇರಳಕಟ್ಟೆ ಕಡೆಗೆ ಸಂಚರಿಸುವ ಸ್ಥಳೀಯ ದ್ವಿಚಕ್ರ / ಲಘು ವಾಹನಗಳು ಅಡ್ಯಾರ್-ಹರೇಕಳ(ಬ್ರಿಡ್ಜ್) ಮುಖಾಂತರ ಸಂಚರಿಸುವುದು.
*ತಲಪಾಡಿ, ಉಳ್ಳಾಲ ಕಡೆಯಿಂದ ಬೆಂಗಳೂರು ಉಪ್ಪಿನಂಗಡಿ - ಪುತ್ತೂರು - ಸುಳ್ಯ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟಿನಿಂದ ಬಲಕ್ಕೆ ತಿರುಗಿ ಮುಡಿಪು ಬೋಳಿಯಾರ್ -ಮೆಲ್ಕಾರ್ ಮೂಲಕ ಸಂಚರಿಸುವುದು
*ಬಿ.ಸಿ ರೋಡ್ ಕಡೆಯಿಂದ ತಲಪಾಡಿ ಮತ್ತು ಕೇರಳ ಕಡೆಗೆ ಸಂಚರಿಸುವ ವಾಹನಗಳು ಮೆಲ್ಕಾರ್-ಮುಡಿಪು-ತೊಕ್ಕೊಟ್ಟು ಮುಖಾಂತರ ಸಂಚರಿಸುವುದು.
ರಸ್ತೆ ದುರಸ್ತಿ ಸಂದರ್ಭದಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಸಾರ್ವಜನಿಕರು ಸಹಕರಿಸಬೇಕು. ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸಬೇಕೆಂದು ಮಂಗಳೂರು ನಗರ ಪೊಲೀಸರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.