ಉಳ್ಳಾಲ, ಮಾ.31 (DaijiworldNews/AA): ಲಕೋಟೆಯೊಂದರಲ್ಲಿ ಸಂಸ್ಕರಿಸಿಟ್ಟ ಮಾನವ ಅಸ್ಥಿಗಳು ಕುಂಪಲ ಚಿತ್ರಾಂಜಲಿ ನಗರದಲ್ಲಿ ಮಾ.29ರ ರಾತ್ರಿ ಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಅಸ್ಥಿಗಳ ಹಿಂದಿನ ನಿಜಾಂಶವನ್ನು ಪತ್ತೆ ಮಾಡಿದ್ದಾರೆ.
ಶನಿವಾರ ನಡುರಾತ್ರಿ ಚಿತ್ರಾಂಜಲಿ ನಗರದ ಮನೆಯ ಆವರಣದ ಬಳಿ ಪ್ರಯೋಗಾಲಯದ ಮಾದರಿಯ ಅಸ್ಥಿಗಳು ಲಕೋಟೆಯಲ್ಲಿ ಸಂಸ್ಕರಿಸಿದ ರೀತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದ ಜನರು ಘಟನಾ ಸ್ಥಳಕ್ಕೆ ಜಮಾಯಿಸಿದ್ದರು. ಈ ಬಗ್ಗೆ ತಿಳಿದು ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸರು ಅಸ್ಥಿಗಳು ತುಂಬಿದ್ದ ಲಕೋಟೆಯನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.
ಚಿತ್ರಾಂಜಲಿ ನಗರದಲ್ಲಿ ದೊರೆತ ಅಸ್ಥಿಗಳನ್ನು ಸ್ಥಳೀಯ ಮಹಿಳೆಯೇ ತನ್ನ ಮನೆಯ ಆವರಣದ ಹತ್ತಿರ ಎಸೆದಿರುವ ವಿಚಾರ ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ. ಮಹಿಳೆಯು ಮಂಗಳೂರಿನ ವೈದ್ಯರೋರ್ವರ ಮನೆಯಲ್ಲಿ ಕೆಲಸಕ್ಕಿದ್ದು, ನಿವೃತ್ತಿ ಹೊಂದಿದ್ದ ವೈದ್ಯರು ಮನೆ ಬಿಟ್ಟು ಹೋದಾಗ ಮನೆಯಲ್ಲಿದ್ದ ಕೆಲ ಸಾಮಗ್ರಿಗಳನ್ನು ಮಹಿಳೆ ತಂದಿದ್ದರು ಎನ್ನಲಾಗಿದೆ. ವೈದ್ಯರ ಮನೆಯಿಂದ ತಂದ ಸಂಸ್ಕರಿಸಿಡಲಾದ ಅಸ್ಥಿಗಳ ಲಕೋಟೆಯನ್ನು ಮಹಿಳೆಯು ತನ್ನ ಮನೆಯ ಕಾಂಪೌಡ್ ಬಳಿ ಎಸೆದಿದ್ದರೆ ಎಂದು ಹೇಳಲಾಗಿದೆ.
ಕಳೆದ ವಾರ ಚಿತ್ರಾಂಜಲಿ ನಗರದಲ್ಲಿ ನಡೆದ ಸ್ಥಳೀಯ ಸಂಘಟನೆಯೊಂದರ ವಾರ್ಷಿಕೋತ್ಸವದ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದ ಯುವಕನೋರ್ವನ ಬಾಡಿಗೆ ಕಾಸ್ಟ್ಯೂಮ್ ಕಳೆದು ಹೋಗಿತ್ತು. ನಿನ್ನೆ ರಾತ್ರಿ ಯುವಕ ಕಾಸ್ಟ್ಯೂಮ್ ಹುಡುಕಲು ಬಂದಾಗ ಅಸ್ಥಿಗಳ ಲಕೋಟೆ ಸಿಕ್ಕಿದೆ ಎನ್ನಲಾಗಿದೆ.