ಮಂಗಳೂರು, ಜೂ 16 (Daijiworld News/SM): ಕೃಷ್ಣಮೃಗ ಬೇಟೆಯಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಪಣಂಬೂರು ತಣ್ಣೀರು ಬಾವಿಯ ಬಳಿಯ ಕಸಬಾ ಬೆಂಗರೆ ಕಡೆಗೆ ಹೋಗುವ ಕುದುರೆ ಮುಖ ಜಂಕ್ಷನ್ ಬಳಿಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ರಮೇಶ್ ಮಲ್ಲಪ್ಪ ಯಾದ್ ವಾಡ್(51) ಹಾಗೂ ರಾಜು ಬಿರಾದಾರ್(47) ಬಂಧಿತ ಆರೋಪಿಗಳು.
ಮಂಗಳೂರು ನಗರ ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀ ನಿವಾಸ್ ಆರ್. ಗೌಡ ಇವರ ನೇತ್ರತ್ವದ ರೌಡಿ ನಿಗ್ರಹ ದಳಕ್ಕೆ ದೊರೆತ ಖಚಿತ ಮಾಹಿತಿಯಂತೆ ಪಣಂಬೂರು ಪೊಲೀಸ್ ಠಾಣೆಯ ಠಾಣಾಧಿಕಾರಿ ಸತ್ಯನಾರಾಯಣ, ರೌಡಿ ನಿಗ್ರಹ ದಳದ ಅಧಿಕಾರಿ ಸಿಬ್ಬಂದಿಗಳು ಹಾಗೂ ಮಂಗಳೂರು ಅರಣ್ಯ ವಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಪಣಂಬೂರು ತಣ್ಣೀರು ಬಾವಿಯ ಬಳಿಯಲ್ಲಿ ಕಸಬಾ ಬೆಂಗರೆ ಕಡೆಗೆ ಹೋಗುವ ಕುದುರೆ ಮುಖ ಜಂಕ್ಷನ್ ಬಳಿಯಲ್ಲಿ ಮೋರಿಯ ಬಳಿಯಲ್ಲಿ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಯಾವುದೋ ವಸ್ತುವನ್ನು ಹಿಡಿದುಕೊಂಡು ನಿಂತುಕೊಂಡಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಜೀಪನ್ನು ಕಂಡು ಗೋಣಿ ಚೀಲವನ್ನು ಅಲ್ಲಿಯೇ ಬಿಟ್ಟು ರಸ್ತೆಯಯಲ್ಲಿ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಅನುಮಾನಗೊಂಡ ಅವರುಗಳನ್ನು ಹಿಡಿದು ಗೋಣಿಚೀಲ ಪರಿಶೀಲಿಸಿದಾಗ ಅಕ್ಕಿ ಚೀಲದ ಒಳಗಡೆ ಒಂದು ಜಿಂಕೆಯ ಚರ್ಮ ಪತ್ತೆಯಾಗಿದೆ.