ಮಂಗಳೂರು, ಜೂ 17(Daijiworld News/MSP): ಒಂಬತ್ತು ತಿಂಗಳ ಹಿಂದೆ ಕುವೈತ್ನಲ್ಲಿ ಚಾಲಕನಾಗಿ ಉದ್ಯೋಗ ದೊರೆತಾಗ ಮಂಗಳೂರಿನ ಅಂಬ್ಲಮೊಗೆರುವಿನ ಯುವಕ ನೆಲ್ಸನ್ ಡಿ'ಸೋಜಾ(24) ಖುಷಿಗೆ ಪಾರವೇ ಇರಲಿಲ್ಲ. ಕಷ್ಟಗಳು ಮುಗಿದು, ತಮ್ಮ ಕುಟುಂಬವಿನ್ನು ನೆಮ್ಮದಿಯಾಗಿ ಬದುಕ ಸಾಗಿಸಬಹುದು ಎಂದು ಭವಿಷ್ಯದ ಬಗ್ಗೆ ಕನಸು ಕಾಣುತ್ತಾ ನೆಲ್ಸನ್ ಕುವೈತ್ ವಿಮಾನವೇರಿದ್ದರು.
ಆದರೆ, ಅಲ್ಲಿ ತಲುಪಿದಾಗ ಪರಿಸ್ಥಿತಿ ನೆಲ್ಸನ್ ಅಂದುಕೊಂಡಂತಿರಲಿಲ್ಲ. ಪಾಸ್ಪೋರ್ಟ್ ಕಸಿದುಕೊಂಡು, ಆಹಾರವನ್ನು ಮಾತ್ರ ನೀಡುವ ಉದ್ಯೋಗದಾತನು ವೇತನ ನೀಡದೆ ಗುಲಾಮನಂತೆ ನಡೆಸುಕೊಳ್ಳುವ ರೀತಿಯನ್ನು ನೆಲ್ಸನ್ ಕನಸುಗಳು ಕಮರಲಾರಂಭಿಸುತ್ತವೆ.
ಕಳೆದೊಂದು ವಾರದಿಂದ ನೆಲ್ಸನ್ರ ತಂದೆಯ ಆರೋಗ್ಯ ತೀರಾ ಹದಗೆಟ್ಟಿದ್ದು, ಈ ಹಿನ್ನಲೆಯಲ್ಲಿ ತವರೂರಿಗೆ ಮರಳು ಅನಿವಾರ್ಯ ಸ್ಥಿತಿ ನೆಲ್ಸನ್ ರಿಗೆ ಬಂದೊದಗಿದೆ. ಆದರೆ ಪರಿಸ್ಥಿತಿಯನ್ನು ಉದ್ಯೋಗದಾತನಿಗೆ ತಿಳಿಸಿದಾಗ ನೆಲ್ಸರ್ ರನ್ನು ಭಾರತಕ್ಕೆ ಕಳುಹಿಸುವ ಬದಲು ಸೌದಿ-ಕುವೈತ್ ಗಡಿಯ ದೂರದ ಪ್ರದೇಶಕ್ಕೆ ಕಳುಹಿಸಿ ತನ್ನಿಂದ ಮುಂದಿನ ಸೂಚನೆ ಬರುವವರೆಗೂ ಅಲ್ಲಿಯೇ ಕೆಲಸ ಮಾಡುವಂತೆ ಆದೇಶಿಸಿ ಮೂರು ದಿನಗಳಿಂದ ಆಹಾರವನ್ನು ನೀಡದೆ ಸತಾಯಿಸಿದ್ದಾನೆ. ಕಳೆದ ರಾತ್ರಿ ವಾಟ್ಸಾಪ್ ಸಂದೇಶವೊಂದರಲ್ಲಿ ನೆಲ್ಸನ್ ತನ್ನ ಗೆಳೆಯರಿಗೆ ತನಗೆ ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವಿಲ್ಲ, ತನ್ನ ಮೊಬೈಲ್ ಫೋನ್ನಲ್ಲಿ ಕರೆನ್ಸಿ ಮತ್ತು ಬ್ಯಾಟರಿ ಇಲ್ಲವೆಂದು, ಸಹಾಯಕ್ಕಾಗಿ ಯಾಚಿಸಿದ್ದಾರೆ.
ಕುವೈತ್ ನಲ್ಲಿ ಕಂಗೆಟ್ಟ ನೆಲ್ಸನ್ನ ಬಗ್ಗೆ ದಾಯ್ಜಿವಲ್ಡ್ ಮಾಹಿತಿ ಪಡೆದು ನೆಲ್ಸನ್ ನ ಸ್ನೇಹಿತರನ್ನು ಸಂಪರ್ಕಿಸಿದಾಗ , " ನೆಲ್ಸನ್ ಕುಟುಂಬ ಕಡು ಬಡತನದಿಂದ ಬಳಲುತ್ತಿದ್ದು, ಕುಟುಂಬದ ಜವಾಬ್ದಾರಿ ನೆಲ್ಸನ್ ಹೆಗಲಮೇಲಿದೆ. ಕಳೆದ ಹಲವು ದಿನಗಳಿಂದ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದು ನೆಲ್ಸನ್ ತಮ್ಮ ಉದ್ಯೋಗದಾತರನ್ನು ಸಂಪರ್ಕಿಸಿ ಪಾಸ್ಪೋರ್ಟ್ನ್ನು ಹಿಂತಿರುಗಿಸಿ ಭಾರತಕ್ಕೆ ಮರಳುವಂತೆ ಕೇಳಿಕೊಂಡಾಗ, ನೆಲ್ಸನ್ ತಂದೆಯ ಅನಾರೋಗ್ಯದ ಕುರಿತು ಸುಳ್ಳು ಹೇಳುತ್ತಿದ್ದಾನೆಂದು ಆಪಾದಿಸಿ ಸೌದಿ- ಕುವೈತ್ ಗಡಿಯಲ್ಲಿರುವ ಗುಡ್ಡಗಾಡು ಪ್ರದೇಶ ವಾಫ್ರಾಕ್ಕೆ ಶಿಕ್ಷೆ ರೂಪವಾಗಿ ಕಳುಹಿಸಿದ್ದಾನೆಂದು ತಿಳಿದುಬಂದಿದೆ. ಕಳೆದ ಮೂರು ದಿನಗಳಿಂದ ನಾವೆಲ್ಲಾ ಆತನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರೂ ಅದು ಸಾಧ್ಯವಾಗುತ್ತಿಲ್ಲ. ಭಾನುವಾರ ರಾತ್ರಿ ನೆಲ್ಸನ್ ಕಡೆಯಿಂದ ತನ್ನ ಹೀನಾಯ ಪರಿಸ್ಥಿತಿಯ ಬಗ್ಗೆ ಸಂದೇಶ ರವಾನಿಸಿದ್ದು, ಇದರಲ್ಲಿ ನೆಲ್ಸನ್ ಆಹಾರವಿಲ್ಲದೆ ನಿತ್ರಾಣಗೊಂಡು ಮಾತನಾಡಲು ಅಶಕ್ತನಾಗಿರುವಂತೆ ಕಾಣಿಸುತ್ತಿದೆ" ಎಂದು ಸ್ನೇಹಿತರು ತಿಳಿಸಿದ್ದಾರೆ. ಅಲ್ಲದೆ ವಾಫ್ರಾದಿಂದ ಜಾಮಿಯಾಕ್ಕೆ ಹೋಗುವ ದಾರಿಯಲ್ಲಿ ತಾನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ಮಧ್ಯೆ , ವೀಸಾ ರದ್ದತಿ ಪ್ರಕ್ರಿಯೆಯ ಶುಲ್ಕವಾಗಿ ನೆಲ್ಸನ್ 500 ಕೆಡಿ ಪಾವತಿಸಿದರೆ ಪಾಸ್ಪೋರ್ಟ್ ಹಸ್ತಾಂತರಿಸಿ ಆತನನು ಬಿಡುಗಡೆ ಮಾಡಲು ಸಿದ್ಧ ಎಂದು ಉದ್ಯೋಗದಾತ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಆತನ ಸ್ನೇಹಿತರೆಲ್ಲರೂ ಕನಿಷ್ಟ ಸಂಬಳಕ್ಕೆ ದುಡಿಯುವವರಾಗಿದ್ದು, ಇಷ್ಟು ದೊಡ್ಡ ಮೊತ್ತ ಪಾವತಿಸಲು ಸಾಧ್ಯವಿಲ್ಲ. ಮಾತ್ರವಲ್ಲದೆ ವೀಸಾ ರದ್ದತಿ ಪ್ರಕ್ರಿಯೆ ಜಟಿಲವಾಗಿದ್ದು, ಒಂದು ವೇಳೆ ಹಣವನ್ನು ಪಾವತಿಸಿದ ಮೇಲೂ ಉದ್ಯೋಗದಾತ ನೆಲ್ಸನ್ರನ್ನು ಬಿಡುಗಡೆ ಮಾಡುತ್ತಾರೆ ಎಂದು ಖಚಿತತೆ ಇಲ್ಲ. ಹೀಗಾಗಿ ಕುವೈಟ್ನ ಕಾನೂನು ತಿಳಿದಿರುವ, ಸರ್ಕಾರ ಅಥವಾ ಎನ್ಜಿಒಗಳು ನೆಲ್ಸನ್ಗೆ ಭಾರತಕ್ಕೆ ಸುರಕ್ಷಿತವಾಗಿ ಮರಳಲು ಮಾತ್ರ ಸಹಾಯ ಮಾಡಬಹುದಾಗಿದೆ.
ಸಂಕಷ್ಟಕ್ಕೆ ಸಿಲುಕಿದ ತನ್ನನ್ನು ಬಂಧಮುಕ್ತಿಯನ್ನಾಗಿಸಲು ಸರ್ಕಾರ , ಸಂಘಸಂಸ್ಥೆಗಳು ಸಹಾಯಹಸ್ತ ಚಾಚಬಹುದೆಂಬ ನಿರೀಕ್ಷೆಯಲ್ಲಿ ನೆಲ್ಸನ್ ದಿನಕಳೆಯುತ್ತಿದ್ದು ವಿದೇಶದಲ್ಲಿ ಅವನಿಗೆ ಏನಾಗುತ್ತಿದೆ ಎಂದು ತಿಳಿಯದೆ ಅವನ ಕುಟುಂಬವೂ ಅವನನ್ನು ಕಾಯುತ್ತಿದೆ.