ಮಂಗಳೂರಿಗೆ ಡಿ 4: ಒಬ್ಬ ಪ್ರಜ್ಞಾವಂತ ನಾಗರಿಕನಾಗಿ ನಾನು ವ್ಯವಸ್ಥೆಯಲ್ಲಿ ಬದಲಾವಣೆ ಬಯಸಿದ್ದೇನೆ ಮತ್ತು ನನ್ನಂತಹ ಅನೇಕರಿಗೆ ಈ ಬದಲಾವಣೆಯ ಅಗತ್ಯವಿದೆ. ಇದಕ್ಕಾಗಿಯೇ ಪ್ರಜಾಕೀಯ ವೇದಿಕೆ ಸಿದ್ದವಾಗಿದೆ ಎಂದು ನಿರ್ದೇಶಕ, ನಟ, ಪ್ರಜಾಕೀಯ ಪಕ್ಷದ ಉಪೇಂದ್ರ ಹೇಳಿದರು. ಡಿ 5 ರ ಮಂಗಳವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಸಮಾಜದಲ್ಲಿ ಅನಗತ್ಯ ವಿಷಯಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಪರಸ್ಪರ ದೂರಗಳು, ಕೆಸರೆರೆಚಾಟ ರಾಜಕೀಯ ಕ್ಷೇತ್ರದಲ್ಲಿ ಜಾಸ್ತಿಯಾಗುತ್ತಿದೆ. ಪ್ರಾಥಮಿಕವಾಗಿ ಮೂಲಭೂತ ಸೌಕರ್ಯಗಳು ಪ್ರತಿಯೊಬ್ಬ ಜನಸಾಮಾನ್ಯನಿಗೆ ದೊರೆಯುವ ಬಗ್ಗೆ ಹೆಚ್ಚು ಗಮನಹರಿಸಬೇಕು. ಇದು ಪ್ರಜಾಕೀಯದ ಚಿಂತನೆಯಾಗಿದೆ ಎಂದು ತಿಳಿಸಿದರು.
ಇನ್ನು ಚುನಾವಣಾ ಪ್ರಚಾರಕ್ಕಾಗಿ ಹರಿಸುವ ಕೋಟಿ ಕೋಟಿ ದುಡ್ಡುಗಳು , ಬ್ಯುಸಿನೆಸ್ ರೀತಿ ಕಂಡು ಬರುತ್ತಿದೆ. ಇದೆಲ್ಲವೂ ರಾಜಕೀಯ ವ್ಯವಸ್ಥೆಯ ಅತಿರೇಕ ಆಗಿದೆ. ರಾಜಕೀಯ ಮುಖಂಡ ಎಂದು ತಕ್ಷಣ ಆತ ಸಮಾಜದಲ್ಲಿ ಅಸಾಮಾನ್ಯ ವ್ಯಕ್ತಿಯಾಗಿ ಬಿಡುತ್ತಾನೆ. ಯಾಕೆ ಒಬ್ಬ ಕಾರ್ಮಿಕನಂತೆ ರಾಜಕೀಯ ಮುಖಂಡರಿಗೆ , ಶಾಸಕ , ಸಚಿವರಿಗೆ ಬದುಕಲು ಸಾದ್ಯವಾಗುವುದಿಲ್ಲ. ರಾಜಕೀಯ ವ್ಯಕ್ತಿ ಸಾಮಾನ್ಯರಲ್ಲಿ ಸಾಮಾನ್ಯನಾಗುವ ವ್ಯವಸ್ಥೆ ಸಮಾಜದಲ್ಲಿ ಚಿಗುರೆಡೆಯಬೇಕು ಎಂದರು.
ಧರ್ಮದ ಹೆಸರಿನಲ್ಲಿ ಕೋಮು ಹಿಂಸಾಚಾರ ನಡೆಯುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು "ಸತ್ಯ ಇದ್ದಲ್ಲಿ ನಿಮಗೆ ಧರ್ಮದ ಅಗತ್ಯವಿರುವುದಿಲ್ಲ, ಇಂದು ಜಾತಿ ಧರ್ಮಗಳ ಹೆಸರಿನಲ್ಲಿ ಸಮಾಜದ ಶಾಂತಿ ಕದಡುವ ಕೆಲಸಗಳು ನಡೀತಾ ಇದೆ. ಪ್ರತಿಯೊಬ್ಬನಿಗೂ ಇಂದು ಜಾತಿ ಧರ್ಮ ಎನ್ನುವುದು ಬೇಕು ಆದರೆ ಅದು ಮನಸ್ಸಿನಲ್ಲಿರಬೇಕು ನಂಬಿಕೆಯಲ್ಲಿರಬೇಕು ಅದು ಬಿಟ್ಟು ಜಾತಿ ಧರ್ಮಗಳನ್ನು ಬೀದಿಗೆಳೆಯುವುದು ಎಷ್ಟು ಸರಿ. ಎಲ್ಲಿ ಧರ್ಮ ಜಾತಿ ಬೇಕು ಅನ್ನಿಸುತ್ತದೆಯೋ ಅಲ್ಲಿ ಅಸತ್ಯ ಅಶಾಂತಿ ಇದೆ ಎಂದರ್ಥ.
ದೆಹಲಿಯಲ್ಲಿರುವ ವಾಯುಮಾಲಿನ್ಯದ ಪರಿಸ್ಥಿತಿ ಕರ್ನಾಟಕ ಎದುರಿಸುವ ದಿನ ದೂರ ಇಲ್ಲ. ಯಾಕೆಂದರೆ ನಾವು ಯಾವತ್ತೂ ಸಮಾಜದ ದೃಷ್ಟಿಕೋನದಲ್ಲಿ ಯೋಚಿಸುವುದಿಲ್ಲ..ಆರೋಗ್ಯ ಸಮಸ್ಯೆ , ಶಿಕ್ಷಣದ ಸಮಸ್ಯೆ , ರೋಡ್ ಸಮಸ್ಯೆ ಹೀಗೆ ಸಮಾಜ ಸಮಸ್ಯೆಗಳ ಆಗರವಾಗಿದೆ. ಎಷ್ಟೇ ಶ್ರೀಮಂತನಾದರೂ ಆತ ಅದೇ ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿಯೇ ಓಡಾಡಬೇಕು. ಕೆಟ್ಟು ಹೋದ ವ್ಯವಸ್ಥೆಯಲ್ಲಿ ಬದುಕಬೇಕು ಎನ್ನುವುದನ್ನು ಸುಲಭವಾಗಿ ಮರೆತುಬಿಡುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾಕೀಯ ಪಕ್ಷದ ಅಜಾಂಡದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು ಪಕ್ಷದ ಚಿಂತನೆಯಲ್ಲಿ ಹಲವಾರು ವಿಷಯಗಳಿವೆ. ಎಲ್ಲವನ್ನು ಹಂತಹಂತವಾಗಿ ರೂಪಿಸುವ ಯೋಜನೆ ನಮ್ಮದು ಎಂದರು. ಮೊದಲ ಆರೋಗ್ಯ ಮತ್ತು ಶಿಕ್ಷಣ ಪ್ರತಿಯೊಬ್ಬನಿಗೂ ಕೈಗೆಟಬೇಕು .ಆಸ್ಪತ್ರೆ ಇದ್ರೆ ವೈದ್ಯರು ಇಲ್ಲ, ವೈದ್ಯರಿದ್ದರೆ ಅಸ್ಪತ್ರೆಗಾಗಿ ಕಿಲೋಮೀಟರ್ ಗಟ್ಟಲೆ ಓಡಾಡಬೇಕಾದ ಪರಿಸ್ಥಿತಿ , ವಿಮೆ ಇದೆ ಅದನ್ನು ಸಮರ್ಥವಾಗಿ ಬಳಸಲು ಸಾಮಾನ್ಯನಿಗೆ ಸಾಧ್ಯವಾಗುತ್ತಿಲ್ಲ...ಇನ್ನು ಭಾರತದ ಶಿಕ್ಷಣ ವ್ಯವಸ್ಥೆ ಹೇಗಿದೆ ಅಂದರೆ ಮಕ್ಕಳು ಪ್ರೇಷರ್ ಕುಕ್ಕರ್ ನಲ್ಲಿ ಬೇಯಿಸಿದಂತೆ.. ಭ್ರಷ್ಟಚಾರ ದೂರವಾಗಬೇಕಂದರೆ ಒಳ್ಳೆಯ ವೈದ್ಯಕೀಯ ಸೌಲಭ್ಯ ಮತ್ತು ಶಿಕ್ಷಣ ಲಭ್ಯವಾಗಬೇಕು ಇದು ನಮ್ಮ ಗುರಿ ಎಂದರು.
ನೀವು ಪ್ರಜಾಕೀಯ ಪಕ್ಷದ ಏಕವ್ಯಕ್ತಿ ಪ್ರದರ್ಶನ ಅಲ್ಲವೇ ಎಂಬ ಪ್ರಶ್ನೆಗೆ , ಒಬ್ಬರಾದರೂ ಮುಂದೆ ಬರಲು ಪ್ರಾರಂಭಿಸಬೇಕು ಬಳಿಕ ಜತೆಯಾಗುವವರು ಅನೇಕರು, ಐನೂರು ಸಾವಿರ ಕೊಟ್ಟು ಕೃತಕ ಮತದಾರರನ್ನು ಅಭಿಮಾನಿಗಳನ್ನು ಸೃಷ್ಟಿಸಬಹುದು. ಅವರ ಅಗತ್ಯ ನಮಗಿಲ್ಲ ಸಮಾಜದಲ್ಲಿರುವ ೮೦ ಶೇಕಡಾದಷ್ಟಿರುವ ಉತ್ತಮರ ಬೆಂಬಲ ಮಾತ್ರ ನಮಗೆ ಬೇಕಾಗಿರುವುದು ಎಂದರು , ನಮಗೆ ಬೇಕಾಗಿರುವುದು 224 ಮಂದಿ ಚುನಾವಣ ಕಣಕ್ಕೆ ಇಳಿಯುವವರು ಮತ್ತು ಅಮೂಲ್ಯವಾದ ಮತದಾರ ಬಾಂಧವರು. ಕೋಮು ಗಲಭೆ ಕೆಟ್ಟ ಜನ, ಭ್ರಷ್ಟರು, ಕ್ರಿಮಿನಲ್ಸ್ ಗಳು ನಮಗೆ ಅಗತ್ಯವಿಲ್ಲ ಎಂದು ಉತ್ತರಿಸಿದರು. ಇನ್ನು ಜನವರಿ ಯಲ್ಲಿ ಕೊನೆ ವಾರದೊಳಗಡೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುವುದು ಪಕ್ಷದ ಎಲ್ಲಾ ಮಾಹಿತಿ ಪ್ರಜಾಕೀಯ ಆಪ್ ನಲ್ಲಿ ಲಭ್ಯವಿದೆ ಎಂದು ಮಾಹಿತಿ ನೀಡಿದರು.