ಮಂಗಳೂರು, ಜೂ18(Daijiworld News/SS): ಪ್ರಸ್ತುತ 2019-20ರ ಸಾಲಿಗೆ ವಿಶ್ವವಿದ್ಯಾಲಯವು ತುಳು ಎಂ.ಎ. ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಈಗಾಗಲೇ ಅರ್ಜಿ ಆಹ್ವಾನಿಸಿದೆ ಎಂದು ತಿಳಿದುಬಂದಿದೆ.
ಈ ಕುರಿತು ಮಾತನಾಡಿರುವ ತುಳು ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಸದ್ರಿ ಕೋರ್ಸ್ ಉದ್ಯೋಗದಲ್ಲಿರುವವರಿಗೆ ಅನುಕೂಲವಾಗುವಂತೆ ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಹಂಪನ್ಕಟ್ಟೆ, ಮಂಗಳೂರು ಇಲ್ಲಿ ಸಂಧ್ಯಾ ಕೋರ್ಸಾಗಿ ಕಾರ್ಯ ನಿರ್ವಹಿಸಲ್ಪಡುತ್ತದೆ. ಇದರ ಪ್ರಯೋಜನವನ್ನು ತುಳು ಆಸಕ್ತರು ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಅಸಕ್ತರು ಅರ್ಜಿ ಹಾಗೂ ಮಾಹಿತಿ ಪುಸ್ತಕಗಳನ್ನು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇನಿಂದ ಪಡೆದುಕೊಳ್ಳಬಹುದು. ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಪದವೀಧರು ತುಳು ಎಂ.ಎ.ಗೆ ಪ್ರವೇಶ ಪಡೆಯಲು ಆರ್ಹರಾಗಿದ್ದು, ವಿದ್ಯಾರ್ಥಿಗಳು ಸಂಜೆ ವೇಳೆಯಲ್ಲಿ ಅಭ್ಯಾಸ ಮಾಡಿಕೊಂಡು ಎಂ.ಎ. ಸ್ನಾತಕೋತ್ತರ ಪದವಿ ಪಡೆಯಬಹುದು ಎಂದು ತಿಳಿಸಿದ್ದಾರೆ.
ತುಳು ಎಂ.ಎ ಕೋರ್ಸಿನಲ್ಲಿ ತುಳು ಭಾಷೆಯ ಪ್ರಾಚೀನತೆ, ತುಳು ಸಂಸ್ಕೃತಿ, ತುಳುವರ ಆರಾಧನೆಗಳು ತುಳು ಲಿಪಿ ತುಳುವರ ಕೃಷಿ ಪದ್ಧತಿ, ವ್ಯಾಪಾರ ಸೇರಿದಂತೆ ತುಳುವರ ಉದ್ಯಮಶೀಲತೆಯ ವಿಷಯಗಳು ಒಳಗೊಂಡಿದ್ದು, ತುಳುವರು, ತುಳುವ ಸಮಾಜವನ್ನು ಅಧ್ಯಯನ ಮಾಡಲು ಈ ಕೋರ್ಸಿನಲ್ಲಿ ಅವಕಾಶವಿದೆ ಎಂದು ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ನಿರಂತರ ಪ್ರಯತ್ನದಿಂದಾಗಿ ಎಂ.ಎ ತುಳು ಸ್ನಾತಕೋತ್ತರ ಪದವಿ ಕೋರ್ಸ್ 2018-19ರ ಸಾಲಿನಲ್ಲಿ ಆರಂಭವಾಗಿದ್ದು, ಲಭ್ಯವಿರುವ ಎಲ್ಲಾ ಸೀಟುಗಳು ಭರ್ತಿಯಾಗಿದ್ದವು. ಇದೀಗ ಮತ್ತೆ ತುಳು ಎಂ.ಎ. ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ.