ಬಂಟ್ವಾಳ, ಜೂ18(Daijiworld News/SS): ಸರಕಾರಿ ಶಾಲೆಗೆ ಸೇರಿರುವ ಎಲ್ಲ ವಿದ್ಯಾರ್ಥಿಗಳಿಗೂ ಆಂಗ್ಲ ಮಾಧ್ಯಮ ಶಿಕ್ಷಣ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಭರವಸೆ ನೀಡಿದ್ದಾರೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇರಳಕಟ್ಟೆಯಲ್ಲಿ ಎಸ್ಡಿಎಂಸಿ ವತಿಯಿಂದ ನಡೆದ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಆಂಗ್ಲ ಶಿಕ್ಷಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯಾಗಿದ್ದು, ಈ ನಿಟ್ಟಿನಲ್ಲಿ ಬಡ ವಿದ್ಯಾರ್ಥಿಗಳಿಗೂ ಎಲ್ಲ ಬಾಷೆಯಲ್ಲಿ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭ ಸರಕಾರದ ಮಹತ್ವದ ತೀರ್ಮಾನಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ಬಡ ಜನರೂ ತಮ್ಮ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟೂ ಕಷ್ಟಪಡುತ್ತಾರೆ. ತಮ್ಮ ಮಕ್ಕಳನ್ನು ಬಂಗಾರ ಅಡವಿಟ್ಟು, ಸಾಲ ಮಾಡಿಯಾದರೂ ಶಾಲೆಗೆ ಸೇರಿಸುತ್ತಾರೆ. ಇದೀಗ ಸರಕಾರ ತೆಗೆದುಕೊಂಡಿರುವ ಈ ನಿರ್ಧಾರದಿಂದ ಉಚಿತವಾಗಿ ಶಿಕ್ಷಣಕ್ಕೆ ಅವಕಾಶ ಸಿಕ್ಕಿದೆ ಎಂದು ಹೇಳಿದರು.
ಸರಕಾರ ಪ್ರತಿ ಶಾಲೆಯಲ್ಲಿ ಒಬ್ಬ ಶಿಕ್ಷಕಿಗೆ ತರಬೇತಿ ನೀಡಿ 30 ವಿದ್ಯಾರ್ಥಿಗಳಿಗೆ ಸೀಮಿತ ಮಾಡಿತ್ತು. ಆದರೆ ಕೆಲವೊಂದು ಶಾಲೆಗಳಲ್ಲಿ ಮಿತಿಗಿಂತಲೂ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಸೇರ್ಪಡೆಯಾದ ಎಲ್ಲ ವಿದ್ಯಾರ್ಥಿಗಳಿಗೂ ಶಿಕ್ಷಣದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.