ಉಡುಪಿ, ಏ.20 (DaijiworldNews/AA): ಒಂದೇ ಸ್ಕೂಟಿಯಲ್ಲಿ ಐವರು ಕುಳಿತು ನಿಯಮ ಉಲ್ಲಂಘಿಸಿ ಸಂಚಾರ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಮಣಿಪಾಲ ಪ್ರದೇಶದಲ್ಲಿ ನಡೆದಿರಬಹುದು ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಐವರು ವ್ಯಕ್ತಿಗಳು ಅಪಾಯಕಾರಿಯಾಗಿ ಸ್ಕೂಟಿ ಚಲಾಯಿಸುತ್ತಿರುವುದು ಕಂಡುಬಂದಿದೆ. ರಸ್ತೆ ಸುರಕ್ಷತೆ ಮತ್ತು ಕಾನೂನು ಉಲ್ಲಂಘಿಸಿ ಈ ಐವರು ಸ್ಕೂಟಿಯಲ್ಲಿ ಸಂಚಾರ ಮಾಡಿದ್ದಾರೆ. ಘಟನೆ ನಡೆದ ಸ್ಥಳ ನಿಖರವಾಗಿ ಇನ್ನೂ ದೃಢಪಟ್ಟಿಲ್ಲವಾದರೂ, ಮೂಲಗಳ ಪ್ರಕಾರ ಇದು ಮಣಿಪಾಲ ಪ್ರದೇಶಕ್ಕೆ ಸಂಬಂಧಿಸಿದೆ ಎಂದು ಹೇಳಲಾಗಿದೆ.
ಮಣಿಪಾಲ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಆದರೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ. ಸ್ಕೂಟಿಯಲ್ಲಿದ್ದವರು ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. "ವಿದ್ಯಾರ್ಥಿಗಳು ನಿಯಮ ಉಲ್ಲಂಘಿಸಿದರೆ ಅವರಿಗೆ ಶಿಕ್ಷೆ ಆಗುವುದಿಲ್ಲವೇ? ಪೊಲೀಸರು ಕ್ರಮ ಕೈಗೊಳ್ಳುವುದಿಲ್ಲವೇ? ಸಂಚಾರ ನಿಯಮಗಳು ಅನ್ವಯಿಸುವುದಿಲ್ಲವೇ?" ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ.
ಉಡುಪಿ-ಮಣಿಪಾಲ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಬಗ್ಗೆಯೂ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದು, ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸುರಕ್ಷತೆಗೆ ಅಪಾಯ ತಂದೊಡ್ಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಂತಹ ಅಪರಾಧಿಗಳ ವಿರುದ್ಧ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳದಿರುವುದನ್ನು ಅವರು ಪ್ರಶ್ನಿಸಿದ್ದಾರೆ.