ಉಡುಪಿ, ಏ.21 (DaijiworldNews/AA): ಮಣಿಪಾಲದಲ್ಲಿ ಒಂದೇ ಸ್ಕೂಟಿಯಲ್ಲಿ ಐವರು ಕುಳಿತು ನಿಯಮ ಉಲ್ಲಂಘಿಸಿ ಸಂಚಾರ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮಣಿಪಾಲ ಪೊಲೀಸರು ಸ್ಕೂಟಿಯನ್ನು ಭಾನುವಾರ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಏ. 17ರಂದು ರಾತ್ರಿ ಈ ಘಟನೆ ನಡೆದಿತ್ತು. ಸ್ಕೂಟಿ ಸವಾರರು ಹಾಗೂ ಸ್ಕೂಟಿಯನ್ನು ಪತ್ತೆಹಚ್ಚಲಾಗಿದ್ದು, ಐವರು ಸವಾರರ ಪೈಕಿ ಮೂವರು ಅಪ್ರಾಪ್ತರು ಎನ್ನಲಾಗಿದೆ.
ಈ ಐವರು ವಿದ್ಯಾರ್ಥಿಗಳಾಗಿದ್ದಾರೆ. ಸ್ಕೂಟಿ ಚಾಲನೆ ಮಾಡುತ್ತಿದ್ದ ಸವಾರನಿಗೆ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ, ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದ ತಪ್ಪಿಗಾಗಿ 10,500 ರೂ. ದಂಡ ವಿಧಿಸಲಾಗಿದೆ.