ಮಂಗಳೂರು, ಜೂ 18 (Daijiworld News/MSP): ಯುವಕನೊಬ್ಬನಿಗೆ ಮಾರಾಟ ಮಾಡುವ ಉದ್ದೇಶದಿಂದ ರಿಕ್ಷಾದಲ್ಲಿ ಗಾಂಜಾ ತಂದಿದ್ದ ಮೂರು ಜನ ಸೇರಿ ಒಟ್ಟು ನಾಲ್ವರನ್ನು ಬಂಧಿಸಿದ ಪೊಲೀಸರು 2 ಕಿ.ಗ್ರಾಂ ಗಾಂಜಾ ಸಹಿತ ಆಟೋ ರಿಕ್ಷಾವನ್ನು ವಶಪಡಿಸಿಕೊಂಡ ಘಟನೆ ಭಾನುವಾರ ಸುರತ್ಕಲ್ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.
ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಸಜಿಪಮೂಡ ಸುಭಾಷ್ ನಗರ ಬಳಿಯ ನಿವಾಸಿ ಆಸೀಫ್(27), ಮಂಗಳೂರು ಉರ್ವ ಮಾರಿಗುಡಿ ಬಳಿಯ ನಿವಾಸಿ ಕಿರಣ್ ಯಾನೆ ಕಿರಣ್ ಮೆಂಡನ್(34), ಮಂಗಳೂರು ಕುದ್ರೋಳಿ ಬಳಿಯ ನಿವಾಸಿ ಅಬ್ದುಲ್ ರಹೀಂ ಯಾನೇ ಅಂಕುಶ್ ರಹೀಂ(47), ಮಂಗಳೂರು ಬೋಳಿಯಾರಿನ ಕುರ್ನಾಡ್ ರಸ್ತೆ ನಿವಾಸಿ ಹಫೋಜ್ ಯಾನೇ ಮೊಯ್ದೀನ್(33) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 2 ಕಿ.ಗ್ರಾಂ. ಗಾಂಜಾ, ಆಟೋ ರಿಕ್ಷಾ, 5 ಮೊಬೈಲ್ ಸಹಿತ 2.70 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಶ್ರೀನಿವಾಸ್ ಆರ್.ಗೌಡ ಇವರ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆದಳ ಸಂಜೆ 6.30ರ ಸುಮಾರಿಗೆ ಸುರತ್ಕಲ್ನ ಚೊಕ್ಕಬೆಟ್ಟು ಸಮೀಪ ಗಸ್ತು ತಿರುಗುತ್ತಿದ್ದರು. ಈ ಸಂದರ್ಭ ಉಳ್ಳಾಲ ಹಾಗೂ ಬಿ.ಸಿ.ರೋಡ್ ಕಡೆಯಿಂದ ಮೂರು ಜನರು ಗಾಂಜಾದೊಂದಿಗೆ ಆಟೋರಿಕ್ಷಾದಲ್ಲಿ ಸುರತ್ಕಲ್ ರೈಲ್ವೆ ನಿಲ್ದಾಣದ ಬಳಿ ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆಕಿದೆ. ಈ ಹಿನ್ನೆಲೆಯಲ್ಲಿ ಬಜ್ಪೆ ಪೊಲೀಸ್ ನಿರೀಕ್ಷಕ ಪರಶಿವ ಮೂರ್ತಿ ಅವರ ವಿಶೇಷ ಅಪರಾಧ ಪತ್ತೆ ದಳ ಸುರತ್ಕಲ್ ರೈಲ್ವೆ ನಿಲ್ದಾಣದ ಬಳಿ ಕಾದು ಕುಳಿತಿದ್ದರು. ಸಂಜೆ 7 ಗಂಟೆ ಸುಮಾರಿಗೆ ರಿಕ್ಷಾವೊಂದು ಬಂದಿದ್ದು, ಹಿಂಬದಿ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಇಳಿದು ಪ್ಲಾಸ್ಟಿಕ್ ಚೀಲವೊಂದನ್ನು ರಸ್ತೆ ಬದಿಯಲ್ಲಿ ನಿಂತಿರುವ (ಹಲವು ಪ್ರಕರಣಗಳ ಆರೋಪಿ) ಕಿರಣ್ ಮೆಂಡನ್ ಕೊಡುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ್ದಾರೆ.
ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.