ಮೂಡುಬಿದಿರೆ/ಬಂಟ್ವಾಳ, ಏ.23 (DaijiworldNews/AA): ಚಲಿಸುತ್ತಿದ್ದ ಕಾರೊಂದರ ಮೇಲೆ ಮರ ಮುರಿದುಬಿದ್ದು ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ಮಂಗಳವಾರ ಸಂಜೆ ವೇಳೆಗೆ ಬೀಸಿದ ಬಿರುಗಾಳಿಯಿಂದಾಗಿ ಮೂಡುಬಿದಿರೆ - ಬಂಟ್ವಾಳ ರಾಜ್ಯ ಹೆದ್ದಾರಿ ಹಾದು ಹೋಗುವ ಬಿರಾವು ಗಾಜಿಗಾರ ಪಲ್ಕೆಯಲ್ಲಿ ನಡೆದಿದೆ.


ಸಂಜೆ ಬೀಸಿದ ಗಾಳಿಗೆ ಹಲವು ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ಕಂಬಗಳು ನೆಲಕ್ಕೆ ಉರುಳಿದ್ದು, ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಬಳಿಕ ಅರಣ್ಯ ಇಲಾಖೆ, ಮೆಸ್ಕಾಂ ಹಾಗೂ ಪೊಲೀಸರು ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮಂಗಳವಾರ ಬೀಸಿದ ಗಾಳಿಗೆ ವೇಣೂರು ಮಾರ್ಗದಲ್ಲಿ ಮಾರೂರು ಶಾಲೆಯ ಬಳಿ ರಜಾಕ್ ಅವರ ಮನೆ ಮೇಲೆ ಮರ ಉರುಳಿ ಬಿದ್ದಿದ್ದು, ಮನೆಗೆ ತೀವ್ರ ಹಾನಿಯುಂಟಾಗಿದೆ. ಘಟನೆಯಲ್ಲಿ ಮನೆಯೊಳಗಿದ್ದವರಿಗೆ ಯಾವುದೇ ಪ್ರಾಣಾಪಾಯವುಂಟಾಗಿಲ್ಲ. ಇನ್ನು ಮಾರೂರು ಗುಡ್ಡಲಂಗಡಿಯಲ್ಲಿ ದೈವಸ್ಥಾನದ ಬಳಿ ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯುಂಟಾಗಿದೆ. ಹತ್ತಿರದ ದಲಿತ ಕಾಲನಿಯಲ್ಲಿ ವಿದ್ಯುತ್ ತಂತಿಗಳ ಮೇಲೆ ಮರ ಬಿದ್ದಿದೆ. ಜೊತೆಗೆ ಮೂಡುಬಿದಿರೆ ಪೇಟೆಯಲ್ಲಿಯೂ ಕೆಲ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಮಂಗಳವಾರ ಸುರಿದ ಗುಡುಗು ಸಹಿತ ಗಾಳಿ ಮಳೆಗೆ ಪಾಣೆಮಂಗಳೂರು ಹಾಗೂ ಮಣಿನಾಲ್ಕೂರು ಗ್ರಾಮದಲ್ಲಿ ಮನೆಗಳು ಹಾಗೂ ತೋಟಕ್ಕೆ ಹಾನಿಯುಂಟಾಗಿದೆ.
ಪಾಣೆಮಂಗಳೂರು ಗ್ರಾಮದ ಗಿರಿಧರ ಕಾಮತ್ ಅವರಿಗೆ ಸೇರಿದ ಅಕ್ಕಿ ಗಿರಣಿಯ ಮೇಲ್ಪಾವಣಿಯ ಹಂಚುಗಳು ಗಾಳಿಗೆ ಹಾರಿ ಹಾನಿಗೀಡಾಗಿದೆ. ಹಾಮದ್ ಬಾವ ಹಾಗೂ ಉಸ್ಮಾನ್ ಅವರ ಮನೆಗಳ ಮೇಲ್ಪಾವಣಿಯ ಹಂಚುಗಳಿಗೂ ಹಾನಿಯಾಗಿದೆ. ವಸಂತಿ ಮೋನಪ್ಪ ಅವರ ಮನೆ ಮೇಲೆ ಮರ ಬಿದ್ದ ಪರಿಣಾಮ ಹಾನಿಯುಂಟಾಗಿದೆ. ಇನ್ನು ಗಾಳಿಯಿಂದಾಗಿ ಶೇಖಬ್ಬ ಅವರ ಮನೆಗೆ ಹಾನಿಯಾಗಿದೆ.
ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆಯ ಕುಲ್ಲುಂಬಿ ಅವರ ಮನೆಯ ಹಿಂಬದಿಯ ಗೋಡೆ ಹಾಗೂ ಮೇಲ್ಬಾವಣಿಯ ಸುಮಾರು 12 ಶೀಟ್ಗಳಿಗೆ ಗಾಳಿ ಮಳೆಯಿಂದ ಹಾನಿಯಾಗಿದೆ. ಕೊಟ್ಟುಂಜದಲ್ಲಿ ಪ್ರವೀಣ್ ಆಳ್ವ ಅವರ ತೋಟದಲ್ಲಿದ್ದ ಮರವು ಗಾಳಿ ಮಳೆಗೆ ಬಿದ್ದು ಸುಮಾರು 35 ಅಡಿಕೆ ಮರಗಳು ಹಾನಿಗೊಳಗಾಗಿದೆ.