ಸುಳ್ಯ, ಜೂ18(Daijiworld News/SS): ಸುಳ್ಯ - ಕಡಬದ ಅರಣ್ಯ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಜಾಸ್ತಿ ಆಗಿದ್ದು, ಕಾಡಂಚಿನ ಸುಳ್ಯ ಸೇರಿದಂತೆ ಬೆಳ್ತಂಗಡಿ ಪ್ರದೇಶಗಳಲ್ಲಿ ಕಾಡಾನೆಗಳು ತೋಟಗಳಿಗೆ ಲಗ್ಗೆ ಇಡುತ್ತಿರುವ ಘಟನೆ ವರದಿಯಾಗಿವೆ.
ಕಡಬದ ತಾಲೂಕಿನ ಕೊಣಾಜೆ ಗ್ರಾಮದ ಪುತ್ತಿಗೆ ವಟ್ಟೊತ್ತ್ ಸುನಿಲ್ ಜೋಸೆಫ್ ಅವರ ತೋಟಕ್ಕೆ ಕಳೆದ ಮೂರು ದಿನಗಳಿಂದ ಕಾಡಾನೆ ನಿರಂತರ ದಾಳಿ ನಡೆಸುತ್ತಿದ್ದು, ಅಪಾರ ಪ್ರಮಾಣದ ಕೃಷಿ ನಾಶವಾಗಿದೆ. ಕಾಡಾನೆಗಳ ಹಾವಳಿಯಿಂದ ಬಾಳೆ, ಅಡಿಕೆ ಬೆಳೆಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಕಾಡಾನೆಗಳ ದಾಳಿ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ಥಳಿಯರ ಮಾಹಿತಿ ಪ್ರಕಾರ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ ಎನ್ನಲಾಗಿದೆ.
ಸುಳ್ಯ - ಕಡಬದ ಅರಣ್ಯ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸ್ತಳೀಯರನ್ನು ಭಯಭೀತರನ್ನಾಗಿಸಿದೆ. ಪರಿಸರದಲ್ಲಿ ಕಾಡಾನೆಗಳು ಹಲವರ ಕೃಷಿ ತೋಟಗಳಿಗೆ ದಾಳಿ ಮಾಡಿ ಕೃಷಿ ಹಾನಿಗೊಳಿಸುತ್ತಿದೆ. ತೋಟಕ್ಕೆ ಕಳೆದ ನಾಲ್ಕು ದಿನಗಳಿಂದ ರಾತ್ರಿ ವೇಳೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಬಾಳೆ, ಅಡಿಕೆ ಕೃಷಿಗಳನ್ನು ಹಾನಿಗೊಳಿಸಿದೆ.
ರಾತ್ರಿ ವೇಳೆ ಆನೆ ತೋಟದಲ್ಲಿಯೇ ಇರುವುದರಿಂದ ಅಸುಪಾಸಿನ ಜನರು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಗಮನ ಹರಿಸಬೇಕಿದೆ.