ಮಂಗಳೂರು, ಜೂ 18 (Daijiworld News/MSP): ಪ್ರತಿ ವರ್ಷದಂತೆ ಯಾಂತ್ರೀಕೃತ ಮೀನುಗಾರಿಕೆ ಮೇ 31ಕ್ಕೆ ಕೊನೆಗೊಂಡಿದೆ. ಮೀನಿನ ಸಂತಾನೋತ್ಪತ್ತಿ ಅವಧಿಯ ಕಾರಣದಿಂದ ಕಳೆದ 2 ವಾರಗಳಿಂದ ಯಾಂತ್ರೀಕೃತ ದೋಣಿಗಳು ಮತ್ಯ್ಸ ಬೇಟೆಗೆ ವಿರಾಮ ನೀಡಿದೆ. ಈಗ ಸಾಂಪ್ರಾದಾಯಿಕ ಮೀನುಗಾರಿಕೆ ಅವಕಾಶವಿದೆ. ಆದರೆ ಸಾಂಪ್ರಾದಾಯಿಕ ನಾಡದೋಣಿ ಮೀನುಗಾರಿಕೆಗೆ ಕಡಲು ಇನ್ನು ಹದವಾಗಿಲ್ಲ. ಹೀಗಾಗಿ ಮೀನುಗಾರರು ತೂಫಾನ್ ನಿರೀಕ್ಷೆಯಲ್ಲಿ ಕಾಲ ಕಳೆಯುವಂತಾಗಿದೆ.
ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆ ಮಾತ್ರ ನಡೆಯುತ್ತದೆ. ಆದರೆ ನಾಡದೋಣಿ ಸಮುದ್ರಕ್ಕೆ ಇಳಿಯಬೇಕಾದರೆ ಜೋರಾದ ಮಳೆ ಹಾಗೂ ದೊಡ್ಡ ಮಟ್ಟದ ತೂಫಾನ್ ಉಂಟಾಗಿ, ಆ ಬಳಿಕ ಕಡಲು ಶಾಂತವಾಗಬೇಕು. ಆದರೆ ಈ ಬಾರಿ ಕಳೆದ ವರ್ಷಗಳಿಗೆ ಹೋಲಿಸಿದರೆ ಮುಂಗಾರು ತುಸು ವಿಳಂಬವಾಗಿ ಆರಂಭವಾಗಿದೆ. ಇದರ ಪ್ರತಿಕೂಲ ಪರಿಣಾಮ ನಾಡದೋಣಿ ಮೀನುಗಾರಿಕೆಗೂ ತಟ್ಟಿದೆ.
ಮೀನುಗಾರರೆಲ್ಲರೂ ತೂಫಾನ್ ಹಾಗೂ ಅದರ ಪ್ರತಿಕೂಲ ವಾತಾವರಣದ ನಿರೀಕ್ಷೆಯಲ್ಲಿದ್ದಾರೆ. ಮಾತ್ರವಲ್ಲದೆ ಈಗಾಗಲೇ ಕುಲಮಾಸ್ತಿಯಮ್ಮ, ಬಲರಾಮ ದೇವರಿಗೆ ಪೂಜೆ, ಸಮುದ್ರ ಪೂಜೆ ಮುಗಿಸಿದ್ದು, ವಾತಾವರಣದ ಪರಿಸ್ಥಿತಿ ನೋಡಿ ಕಡಳಿಗಿಲಿಯುವ ಲೆಕ್ಕಚಾರದಲ್ಲಿ ಮೀನುಗಾರರಿದ್ದಾರೆ.
ಮುಂಗಾರಿನ ಸಮಯದಲ್ಲಿ ನಡೆಯುವ ನಾಡದೋಣಿ ಮೀನುಗಾರಿಕೆಯಲ್ಲಿ ಬಂಗುಡೆ, ಸಿಗಡಿ ಸಹಿತ ಇನ್ನಿತರ ಮೀನುಗಳು ಸಿಗುವುದು ಹೆಚ್ಚು. ಹೀಗಾಗಿ ದಿನವೊಂದರ ವಹಿವಾಟು ಕೋಟಿ ರೂಪಾಯಿಗೆ ಏರುತ್ತದೆ. ಈ ಸೀಸನ್ ನಲ್ಲಿ ನಾಡದೋಣಿಗಳಲ್ಲಿ ವಹಿವಾಟು ಜೋರಿರುತ್ತದೆ. ಆದರೆ ಮುಂಗಾರು ವಿಳಂಬವಾದಷ್ಟು ನಾಡದೋಣಿ ಮೀನುಗಾರರಿಗೆ ನಷ್ಟವೇ ಹೆಚ್ಚು.